ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಗುರುವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸುಮಾರು 10,500 ಸ್ಕ್ರೀನ್ ಗಳಲ್ಲಿ ತೆರೆಕಂಡ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಶಂಕರ್ ನಿರ್ದೇಶನದ 2.0 ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಹಾಗೂ ಆ್ಯಮಿ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯಾವುದೇ ರಜೆ ಇಲ್ಲದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಿದ್ದರೂ ಕೂಡಾ ಮೊದಲ ದಿನವೇ 2.0(ಹಿಂದಿ) 20.25 ಕೋಟಿ ರೂಪಾಯಿ ಗಳಿಸಿದೆ ಎಂದು ವಾಣಿಜ್ಯ ವಿಶ್ಲೇಷಕ ತಾರನ್ ಆದರ್ಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಚೆನ್ನೈಯಲ್ಲಿ ಬಿಡುಗಡೆಯಾದ ಪ್ರಥಮ ದಿನವೇ 2.64ಕೋಟಿ ರೂಪಾಯಿ ಹಣ ಗಳಿಸಿದೆ. ನಟ ವಿಜಯ್ ಅಭಿನಯದ ಸರ್ಕಾರ್ ಸಿನಿಮಾ ಮೊದಲ ದಿನದ ಗಳಿಕೆ 2.37 ಕೋಟಿ ರೂಪಾಯಿ. ವಿದೇಶದಲ್ಲಿಯೂ 2.0 ಸಿನಿಮಾ ಅಮೆರಿಕದಲ್ಲಿ 2 ಕೋಟಿ ರೂಪಾಯಿ, ಆಸ್ಟ್ರೇಲಿಯಾದಲ್ಲಿ 58 ಲಕ್ಷ ಹಾಗೂ ನ್ಯೂಜಿಲೆಂಡ್ ನಲ್ಲಿ 11 ಲಕ್ಷ ರೂಪಾಯಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಎಲ್ಲಾ ಕಡೆ 3ಡಿ ತಂತ್ರಜ್ಞಾನದಲ್ಲಿ ಪ್ರದರ್ಶನಗೊಂಡಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2.0 ಚಿತ್ರದಲ್ಲಿ ರಜನಿಕಾಂತ್ ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಅದ್ದೂರಿ ವಿಶುವಲ್ ಎಫೆಕ್ಟ್ಸ್ ಹೊಂದಿದೆ.
2.0 ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಅಮೀರ್, ಅಮಿತಾಬ್ ಅಭಿನಯದ ಥಗ್ಸ್ ಆಫ್ ಹಿಂದೋಸ್ತಾನ್(50 ಕೋಟಿ) ಅನ್ನು ಹಿಂದಿಕ್ಕಿರುವುದಾಗಿ ವರದಿ ವಿವರಿಸಿದೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿಯೇ ಅಂದಾಜು 85 ಕೋಟಿ ಗಳಿಕೆ ಕಾಣಲಿದೆ ಎಂದು ತಿಳಿಸಿದೆ.