ಲಕ್ನೋ: ಪೊಲೀಸ್ ಠಾಣೆಯ ಆವರಣದಲ್ಲಿ ನಡೆದಾಡುತ್ತಾ ರೀಲ್ಸ್ ಮಾಡಿದ್ದ ಪರಿಣಾಮ ಇಬ್ಬರು ಯುವಕರನ್ನು ಉತ್ತರಪ್ರದೇಶದ ಗೊಂಡಾದ ವಜೀರ್ ಗಂಜ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆದರೆ ನೆಟ್ಟಿಗರು ಅವರು ಮಾಡಿದ ಅಪರಾಧ ಏನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:M.B.Patil; ₹7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ
ಪೊಲೀಸ್ ಠಾಣೆಯ ಮುಂಭಾಗ ರೀಲ್ಸ್ ಮಾಡಿದ್ದರಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಪೊಲೀಸ್ ಠಾಣೆಯ ವಿಡಿಯೋ ಚಿತ್ರೀಕರಿಸುವುದು ಕಾನೂನು ಬಾಹಿರವೇ ಅಥವಾ ನಿಷೇಧಿತವೇ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಘಟನೆ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೊಂಡಾ ಪೊಲೀಸರು, ಪೊಲೀಸ್ ಠಾಣೆಯೊಳಗೆ ರೀಲ್ಸ್ ಮಾಡುವುದರಿಂದ ಕೆಲವೊಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಬ್ಬರು ಯುವಕರನ್ನು ಬಂಧಿಸಿದ್ದೇವೆ ಎಂದು ತಿಳಿಸಿದೆ. ಅಲ್ಲದೇ ಯುವಕರು ಚಿತ್ರೀಕರಿಸಿದ ರೀಲ್ಸ್ ವಿಡಿಯೊವನ್ನು ಪೊಲೀಸರು ಎಕ್ಸ್ ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಯುವಕರು ರೀಲ್ಸ್ ಅನ್ನು ಪೊಲೀಸ್ ಠಾಣೆ ಹೊರಗಡೆ ಮಾಡಿರುವುದು ದೃಶ್ಯದಲ್ಲಿದೆ.
ಕಳೆದ ವರ್ಷ ಬಾಂಬೆ ಹೈಕೋರ್ಟ್ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಕರಣ ಸಂಬಂಧ ನೀಡಿದ್ದ ತೀರ್ಪಿನಲ್ಲಿ “ಅಧಿಕಾರಿಗಳ ರಹಸ್ಯ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಬೇಹುಗಾರಿಕೆ ಒಳಗೊಂಡಿಲ್ಲ ಎಂದು ಆದೇಶ ನೀಡಿ ಎಫ್ ಐಆರ್ ಅನ್ನು ವಜಾಗೊಳಿಸಿತ್ತು. ಕೋರ್ಟ್ ಕೂಡಾ ಪೊಲೀಸ್ ಠಾಣೆ ನಿಷೇಧಿತ ಪ್ರದೇಶ ಎಂದು ಯಾವುದೇ ಆದೇಶವನ್ನು ಕೊಟ್ಟಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.