Advertisement

ವಿಶೇಷ ಸ್ಥಾನಮಾನ ರದ್ದಾಗಿ ಇಂದಿಗೆ 2 ವರ್ಷ |ಜಮ್ಮು ಕಾಶ್ಮೀರದಲ್ಲಾದ ಬದಲಾವಣೆಗಳೇನು.?

04:26 PM Aug 19, 2021 | ಶ್ರೀರಾಜ್ ವಕ್ವಾಡಿ |

ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಹಿಂದೆ ಈ ದಿನ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಪಟ್ಟಂತೆ  ಐತಿಹಾಸಿಕ ಬದಲಾವಣೆಯನ್ನು ತಂದಿತು. ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರ ನಿರ್ಧಾರ ಕೈಗೊಂಡಿತ್ತು.

Advertisement

ಹೌದು, ಆಗಸ್ಟ್ 5, 2019 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ವಿಭಜನೆಯನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಪ್ರಸ್ತಾಪವನ್ನು ಮಂಡಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಏನು..? 370 ನೇ ವಿಧಿ ಏನು..? ‘35–ಎ’ಕಲಂ ಏನನ್ನು ಹೇಳುತ್ತದೆ..? ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಆದ ಬದಲಾವಣೆಗಳೇನು ಎನ್ನುವುದಕ್ಕೆ ಈ ಲೇಖನ ಸಂಕ್ಷಿಪ್ತ ಮಾಹಿತಿ ನೀಡುತ್ತದೆ.

370 ನೇ ವಿಧಿ ಏನು ಹೇಳುತ್ತದೆ..?

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ದೊಡ್ಡ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋದಿತ ದಾಳಿ ನಡೆಯುತ್ತದೆ. ಇದಕ್ಕೆ ಹೆದರಿದ ಅಲ್ಲಿನ ಕೊನೆಯ ರಾಜ ಹರಿಸಿಂಗ್‌ ಓಡಿ ಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ.

Advertisement

ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾದ ಅಧೀನಕ್ಕೆ ಒಳಪಡುತ್ತವೆ. ಉಳಿದೆಲ್ಲ ಅಧಿಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯುವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗಬೇಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗಬೇಕು. ಆದರೆ ಈಗ ಸಂವಿಧಾನ ಸಮಿತಿ ಇಲ್ಲದಿರುವುದರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರಮಾಧಿಕಾರವಾಗಿದೆ.

ಇದನ್ನೂ ಓದಿ : ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

ಸಂವಿಧಾನದ 370 ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯದ ಕುರಿತು ವಿವರಿಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿದೆ. ಈ ಸಂವಿಧಾನದ 1 ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿವೆ. ಉಳಿದೆಲ್ಲಾ ವಿಧಿಗಳು ಜಾರಿಗೆ ಬಂದದ್ದು 1957ರ ಜನವರಿ 26ರಂದು.ಇದರಿಂದಾಗಿಯೇ ಜಮ್ಮು-ಕಾಶ್ಮೀರದ ಸಂವಿಧಾನವು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ ಎಂದೂ ಹೇಳಲಾಗುತ್ತಿದೆ.

ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಿ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತದೆ ಈ ವಿಧಿ. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ.

‘35–ಎ’ಕಲಂ ಏನು ಹೇಳುತ್ತದೆ..?

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ.

ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಈ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಏನೇನು ಬದಲಾಗಿದೆ..?

ಹೊರ ರಾಜ್ಯದವರೂ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು 

2019 ರ ತನಕ 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿರಲಿಲ್ಲಿ.  ಆದರೇ, ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಈಗ ಯಾವೊಬ್ಬ ದೇಶದ ನಾಗರಿಕನೂ ಜಮ್ಮು ಕಾಶ್ಮೀರದಲ್ಲಿ ಭೂ ಖರೀದಿಸಬಹುದು, ಆಸ್ತಿ ಹೊಂದಬಹುದಾಗಿದೆ.

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವಿಲ್ಲ.!

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದಾಗ ಸ್ವತಂತ್ರ ಧ್ವಜವನ್ನು ಹೊಂದುವ ಅವಕಾಶವಿತ್ತು. ತನ್ನದೇ ಆದ ದಂಡ ಸಂಹಿತೆಯನ್ನು ಹೊಂದಿತ್ತು, ಇದನ್ನು ರಣಬೀರ್ ದಂಡ ಸಂಹಿತೆ ಎಂದು ಕರೆಯಲಾಗುತ್ತಿತ್ತು.

ಮಹಿಳೆಯರಿಗೆ ಸಮಾನತೆ 

ಆಗಸ್ಟ್ 2019 ಕ್ಕಿಂತ ಮೊದಲು, ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಜಮ್ಮು ಕಾಶ್ಮೀರದಲ್ಲಿ ಇದ್ದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಈಗ ಜಮ್ಮ ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ಲಭಿಸಿದೆ.

ಗುಪ್ಕರ್ ಅಲಿಯನ್ಸ್ – ಕಾಶ್ಮೀರಿ ಮಹಾ ಘಟಬಂಧನ್

2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದೇಶದಾದ್ಯಂತ ಬಹುಮತಗಳಿಂದ ಭರ್ಜರಿ ಗೆಲುವು ಕಂಡ ನಂತರ, ಪ್ರತಿಪಕ್ಷಗಳ ಒಗ್ಗೂಡುವಿಕೆಯ ಬೆಳವಣಿಗೆಗಳು ಕಂಡವು. ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ ಜೆಡಿ) ಮತ್ತು ಜನತಾದಳ-ಯುನೈಟೆಡ್ (ಜೆಡಿಯು) ಮೈತ್ರಿಯಾಗುವ ಮೂಲಕ ಪ್ರತಿಪಕ್ಷಗಳ ಒಗ್ಗೂಡುವಿಕೆ ಆರಂಭವಾಯಿತು. ಈ ಪ್ರಯೋಗವನ್ನು ಮಹಾ ಘಟಬಂಧನ್, ಮಹಾ ಮೈತ್ರಿ ಎಂದು ಕರೆಯಲಾಯಿತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಇದು ಯಶಸ್ಸು ಕೂಡ ಕಂಡಿತು.

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮೈತ್ರಿಯಾದವು.

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಯ ಮೆಹಬೂಬ ಮುಫ್ತಿ ಅವರು ಕೈಜೋಡಿಸಿದರು. ಗೃಹ ಬಂಧನದಿಂದ 2020 ರಲ್ಲಿ ಬಿಡುಗಡೆಯಾದ ನಂತರ ಮೈತ್ರಿ ಸಭೆಗಳನ್ನು ನಡೆಸಿದರು. ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿರುವ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುವ ನಿರ್ಣಯವನ್ನು ಅಂಗೀಕರಿಸಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಮ್ಮ ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಸಭೆಗೆ ಕರೆದ್ದರು. ಎಲ್ಲಾ ಪಕ್ಷಗಳು ಚುನಾವಣೆಗೆ ಒಮ್ಮತವನ್ನು ಸೂಚಿಸಿದ್ದವು. ಕೇಂದ್ರ ಸರ್ಕಾರ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿತ್ತು.

ಗುಪ್ಕರ್ ಒಕ್ಕೂಟವು ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ.

ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಪಾಸ್ ಪೋರ್ಟ್ ಇಲ್ಲ..!

ವಿಧ್ವಂಸಕ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಭಾರತೀಯ ಪಾಸ್‌ ಪೋರ್ಟ್‌ ಗಳನ್ನು ನೀಡದಿರಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿತು.

ಇನ್ನು, ವಿಶೇಷ ಸ್ಥಾನಮಾನ ರದ್ದು ಮಾಡುವುದೆಂದರೆ ಕಾಶ್ಮೀರ ವಿಲೀನದ ವೇಳೆ ರಾಜ ಹರಿಸಿಂಗ್ ಜತೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯೂ ಆಗುತ್ತದೆ ಎಂಬ ವಾದವೂ ಇದ್ದಿತ್ತು. ಈ ವಾದ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಪಂಜಾಬ್ ಸಿಎಂ ಸಿಂಗ್ ರ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಪ್ರಶಾಂತ್ ಕಿಶೋರ್ ರಾಜೀನಾಮೆ..! 

Advertisement

Udayavani is now on Telegram. Click here to join our channel and stay updated with the latest news.

Next