Advertisement

2 ವರ್ಷ ಬಳಿಕ ವಿಟ್ಲ ಪ.ಪಂ. ಉಪಾಧ್ಯಕ್ಷರ ಚು.

04:51 PM May 31, 2018 | Team Udayavani |

ವಿಟ್ಲ : ಎರಡು ವರ್ಷಗಳ ಬಳಿಕ ಕೊನೆಗೂ ವಿಟ್ಲ ಪ.ಪಂ.ಗೆ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು. ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಜಯಂತ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

Advertisement

ವಿಟ್ಲ ಪ.ಪಂ. ಅಸ್ತಿತ್ವಕ್ಕೆ ಬಂದು 3 ವರ್ಷಗಳೇ ಕಳೆದಿದ್ದು, ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿ, ಅರುಣ್‌ ಎಂ. ವಿಟ್ಲ ಅಧ್ಯಕ್ಷರಾಗಿ ಆಯ್ಕೆಯಾಗಿ ಎರಡು ವರ್ಷಗಳು ಕಳೆದಿದ್ದವು. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗಿರಲೇ ಇಲ್ಲ. ಪರಿಣಾಮವಾಗಿ ಉಪಾಧ್ಯಕ್ಷರ ಆಯ್ಕೆಯಾಗಿರಲಿಲ್ಲ.

ಕೆಲವು ದಿನಗಳ ಹಿಂದೆ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲು ಸರಕಾರದ ಪೌರಾಡಳಿತ ಇಲಾಖೆ ಸೂಚಿಸಿತ್ತು. ಅದರಂತೆ ಚುನಾವಣಾಧಿಕಾರಿಯಾಗಿ ತಾ| ಕಾರ್ಯ ನಿರ್ವ ಹಣಾಧಿಕಾರಿ ರಾಜಣ್ಣ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷರಾಗಿ ನಾಮ ಪತ್ರ ಸಲ್ಲಿಸಿದ್ದ 7ನೇ ವಾರ್ಡ್‌ನ ಸದಸ್ಯ ಜಯಂತ ಅವರಿಗೆ ಪ್ರತಿಸ್ಪರ್ಧಿಯಾಗಿ ಯಾರೂ ಸ್ಪರ್ಧಿಸದ ಕಾರಣ ಅವರನ್ನೇ ಉಪಾಧ್ಯಕ್ಷರೆಂದು ಅಧಿಕೃತವಾಗಿ ಘೋಷಿಸಲಾಯಿತು.

ಭ್ರಷ್ಟಾಚಾರ ಮುಕ್ತ ಆಡಳಿತ ಮುಖ್ಯ: ಮಠಂದೂರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಟ್ಲವನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಜನರ ಆಶೋತ್ತರಗಳಿಗೆ ಕ್ಲಪ್ತವಾಗಿ ಸ್ಪಂದಿಸಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಪ.ಪಂ. ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ಮಾದರಿ ಪ.ಪಂ.ಆಗಿಸುವ ನಿಟ್ಟಿನಲ್ಲಿ ಶಾಸಕನಾಗಿ ಸಹಕರಿಸುತ್ತೇನೆ. ಈ ಭಾಗದ ಜನರ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಾಗ ಆ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.

ವಿಟ್ಲ ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯಂತ ನಾಯ್ಕ ಅವರು ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಯಾಚಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಪ.ಪಂ. ಸದಸ್ಯರು, ಪ.ಪಂ. ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪಕೀರ ಮೂಲ್ಯ ವಂದಿಸಿದರು.

Advertisement

ಉಪಾಧ್ಯಕ್ಷರ ಅವಧಿ?
ಎರಡು ವರ್ಷಗಳ ಬಳಿಕ ಉಪಾಧ್ಯಕ್ಷರನ್ನು ಆಯ್ಕೆ ಮಾಡಿರುವುದರಿಂದ ಅವರ ಅಧಿಕಾರಾವಧಿ ಇನ್ನೆಷ್ಟು ವರ್ಷಗಳ ಕಾಲವಿದೆ ಎಂದು ಪ್ರಶ್ನಿಸಿದಾಗ ಚುನಾವಣಾಧಿಕಾರಿ ರಾಜಣ್ಣ ಅವರು ಉತ್ತರಿಸಿ, ಅದು ಸರಕಾರದ ನಿಯಮದಂತೆ ಮುಂದುವರಿಯಲಿದೆ ಎಂದು ಹೇಳಿದರು. ವಾಸ್ತವವಾಗಿ
ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತಾವಧಿ ಎರಡೂವರೆ ವರ್ಷಗಳಾಗಿದ್ದು, ಡಿಸೆಂಬರ್‌ ತಿಂಗಳಲ್ಲಿ ಮತ್ತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕು.
ಆದುದರಿಂದ ಈಗ ಅಧಿಕಾರ ಸ್ವೀಕರಿಸಿದ ಉಪಾಧ್ಯಕ್ಷ ಜಯಂತ ನಾಯ್ಕ ಅವರಿಗೆ ಮುಂದಿನ 6 ತಿಂಗಳ ಅವಧಿ ಮಾತ್ರ ಅಧಿಕಾರವಿರುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next