ನವದೆಹಲಿ: ಸಾಮಾಜಿಕ ಜಾಲತಾಣದ ಪ್ಲ್ಯಾಟ್ ಫಾರಂ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟುವ ಮಾರ್ಗಗಳಿಗೆ ಸಂಬಂಧಿಸಿದಂತೆ ಉತ್ತರಿಸುವ ನಿಟ್ಟಿನಲ್ಲಿ ಟ್ವಿಟರ್ ಇಂಡಿಯಾದ ಇಬ್ಬರು ಪ್ರತಿನಿಧಿಗಳು ಶುಕ್ರವಾರ(ಜೂನ್ 18) ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ;ಚಿಕ್ಕಮಗಳೂರು : ಭಾರೀ ಮಳೆಗೆ ಕುಸಿದ ಮನೆ : ಪ್ರಾಣಾಪಾಯದಿಂದ ಅಜ್ಜಿ ಪಾರು
ನಿಗದಿಯಂತೆ ಟ್ವಿಟರ್ ಇಂಡಿಯಾ ಅಧಿಕಾರಿಗಳು ಇಂದು ಸಂಜೆ 4ಗಂಟೆಗೆ ಸಮಿತಿ ಮುಂದೆ ಹಾಜರಾಗಿದ್ದರು. ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗ ತಡೆಗಟ್ಟು ವಿಷಯದ ಕುರಿತು ಪರಿಶೀಲನೆ ನಡೆಸಲು ಸಂಸದೀಯ ಸಮಿತಿ ಈ ಸಭೆಯನ್ನು ಕರೆದಿರುವುದಾಗಿ ವರದಿ ವಿವರಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯು ಟ್ವಿಟರ್ ಇಂಡಿಯಾ ಪ್ರತಿನಿಧಿಗಳನ್ನು ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿರುವುದಾಗಿ ವರದಿ ತಿಳಿಸಿದೆ.
ಕೇಂದ್ರದ ನೂತನ ಐಟಿ ನಿಯಮ ಮತ್ತು ಅವುಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾದ ನಂತರ ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಸಂದರ್ಭದಲ್ಲಿ ಸಂಸದೀಯ ಸ್ಥಾಯಿ ಸಮಿತಿ ಟ್ವಿಟರ್ ಅಧಿಕಾರಿಗಳಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.