ಪ್ಯಾರಿಸ್: ಒಲಿಂಪಿಕ್ಸ್ ಉದ್ಘಾಟನ ಸಮಾರಂಭಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಪ್ಯಾರಿಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಪ್ಯಾರಿಸ್ ಅನ್ನು ಸಂಪರ್ಕಿಸುವ ಅತಿವೇಗದ ರೈಲ್ವೆ ಮಾರ್ಗಗಳಿಗೆ (ಟಿಜಿವಿ) ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಇಡೀ ಪ್ಯಾರಿಸ್ ಸಂಪರ್ಕ ಕಡಿತಗೊಂಡಿತ್ತು. 8 ಲಕ್ಷ ಮಂದಿ ಪ್ರಯಾಣಿಕರು ಅತಂತ್ರಗೊಂಡಿದ್ದರು. ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬರಬೇಕಿದ್ದ ರೈಲು ಕೂಡ ರದ್ದುಗೊಂಡಿತು. ಘಟನೆ ನಡೆದ ಕೂಡಲೇ ಫ್ರಾನ್ಸ್ ರೈಲ್ವೇ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹಲವು ಮಾರ್ಗಗಳನ್ನು ದುರಸ್ತಿಗೊಳಿಸಿತು.
ಈ ಘಟನೆಗೆ ಯಾರು ಹೊಣೆ ಎಂದು ಖಚಿತವಾಗಿಲ್ಲ. ಫ್ರಾನ್ಸ್‌ನ ಕಾನೂನು ಸಚಿವಾಲಯದ ಪ್ರಕಾರ ಅರಾಜಕವಾದಿಗಳು ಅಥವಾ ತೀವ್ರ ಎಡಪಂಥೀಯರು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವನ್ನು ಹಾಳುಗೆಡವುವ ದುರುದ್ದೇಶದಿಂದಲೇ ಈ ಕೃತ್ಯ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮುಖ್ಯವಾಗಿ ಪ್ಯಾರಿಸ್‌ನ ಗೇರ್ ಡು ನಾರ್ಡ್ ಎಂಬ ಪ್ರಮುಖ ರೈಲ್ವೇ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲೇ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ನೂರಾರು ರೈಲುಗಳು ರದ್ದಾದವು. ಪ್ರಯಾಣಿಕರು ನಿಲ್ದಾಣದಲ್ಲಿ ಹತಾಶರಾಗಿ ಕುಳಿತುಕೊಂಡಿದ್ದರು. ಇಡೀ ಯೂರೋಪ್‌ನಲ್ಲಿ ಗರಿಷ್ಠ ಪ್ರಯಾಣಿಕರಿಂದ ತುಂಬಿಕೊಂಡಿರುವ ರೈಲ್ವೇ ನಿಲ್ದಾಣವೆಂಬ ಹೆಗ್ಗಳಿಕೆಯಿರುವ ಗೇರ್ ಡು ನಾರ್ಡ್ ಅಪಾಯಕ್ಕೆ ತುತ್ತಾಗಿದ್ದರಿಂದ ಒಲಿಂಪಿಕ್ಸ್ ಸಂಘಟಕರು, ಭದ್ರತಾ ಸಿಬಂದಿ ಕಂಗಲಾದರು.
ಗೇರ್ ಡು ನಾರ್ಡ್ ಫ್ರಾನ್ಸ್ ಪೂರ್ವ, ಪಶ್ಚಿಮ, ಉತ್ತರ ಭಾಗಗಳನ್ನು ಸಂಪರ್ಕಿಸುತ್ತದೆ. ಅಲ್ಲೇ ಮುಖ್ಯ ದಾಳಿಯಾಗಿದೆ. ಇದರ ಪರಿಣಾಮ ಲಂಡನ್‌ನ ಯೂರೋಸ್ಟಾರ್ ನಿಲ್ದಾಣದಿಂದ ಪ್ಯಾರಿಸ್‌ಗೆ ಹೊರಟಿದ್ದ ಪ್ರಯಾಣಿಕರು ತೊಂದರೆಗೊಳಗಾದರು.