Advertisement

ತಿಮ್ಮಪ್ಪ ಭಕ್ತರಿಗೆ 2 ಟನ್‌ ಉಪ್ಪಿನ ಕಾಯಿ! ಗುಂಟೂರಿನ ಭಕ್ತನ ಕಾಣಿಕೆ

01:28 AM Feb 07, 2021 | Team Udayavani |

ತಿರುಮಲ: ತಿರುಮಲದ ವೆಂಕಟೇಶ್ವರ ದೇವಸ್ಥಾನವನ್ನು ನಿಭಾಯಿಸುವ ಟಿಟಿಡಿ ಟ್ರಸ್ಟ್‌ಗೆ ಆಂಧ್ರದ ರಾಮು ಎನ್ನುವ
ಭಕ್ತರೊಬ್ಬರು ತರಕಾರಿ, ಮಾವಿನಕಾಯಿ, ನಿಂಬೆಹಣ್ಣು ಸೇರಿದಂತೆ ವಿವಿಧ ಬಗೆಯ 2 ಸಾವಿರ ಕೆ.ಜಿ.ಯಷ್ಟು ಉಪ್ಪಿನಕಾಯಿ ದಾನ ಮಾಡಿದ್ದಾರೆ. ಪ್ಲಾಸ್ಟಿಕ್‌ನ ಬೃಹತ್‌ ಕಂಟೇನರ್‌ಗಳಲ್ಲಿ ಈ ಉಪ್ಪಿನಕಾಯಿ ಕಳುಹಿಸಿಕೊಟ್ಟಿರುವ ಅವರು ಇದನ್ನು ಪ್ರತಿನಿತ್ಯ ತಿರುಮಲದ ಕ್ಯಾಂಟೀನ್‌ಗಳಲ್ಲಿ ನಡೆಯುವ ಅನ್ನದಾನದ ಸಮಯದಲ್ಲಿ ಬಳಸಬೇಕೆಂದು ವಿನಂತಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ನಿತ್ಯವೂ ತಿರುಮಲದಲ್ಲಿ ಕನಿಷ್ಠ 1 ಲಕ್ಷ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗುತ್ತಿತ್ತು. ಆದರೆ ಕೋವಿಡ್‌ನ‌ ಈ ಕಾಲ ಘಟ್ಟದಲ್ಲಿ ಭಕ್ತರ ಸಂಖ್ಯೆ ಕಡಿಮೆಯೇ ಇದೆ.

Advertisement

ಈಗಲೂ ಬರುತ್ತಿವೆ ಹಳೆಯ ನೋಟು!
ನೋಟ್‌ಬಂದಿಯಾಗಿ ನಾಲ್ಕು ವರ್ಷಗಳಿಗೂ ಹೆಚ್ಚು ಸಮಯವಾದರೂ, ಈಗಲೂ ಭಕ್ತಾದಿಗಳು ತಿಮ್ಮಪ್ಪನ ಹುಂಡಿಗೆ ಹಳೆಯ 1,000 ರೂಪಾಯಿ, 500 ರೂಪಾಯಿ ನೋಟು ಹಾಕುವುದನ್ನು ಬಿಟ್ಟಿಲ್ಲವಂತೆ! ಇದುವರೆಗೂ ಡಿಮಾನಿಟೈಸ್‌ ಆದ ನೋಟುಗಳ ಮೊತ್ತವೇ 50 ಕೋಟಿ ರೂಪಾಯಿಯನ್ನು ದಾಟಿದೆ. 18 ಕೋಟಿ ಮೊತ್ತದ 1,000 ರೂಪಾಯಿಯ ಹಳೆಯ ನೋಟುಗಳು ಮತ್ತು 32 ಕೋಟಿ ರೂ. ಮೊತ್ತದ 500 ರೂಪಾಯಿ ನೋಟುಗಳನ್ನು ಜನರು ಇದುವರೆಗೂ ಹುಂಡಿಗೆ ಹಾಕಿದ್ದಾರೆ.

3.16 ಕೋಟಿ ದೇಣಿಗೆ ನೀಡಿದ ಶಾಸಕ
ಟಿಟಿಡಿ ಸದಸ್ಯ ಮತ್ತು ಎಐಎಡಿಎಂಕೆ ಶಾಸಕ ಆರ್‌. ಕುಮಾರಗುರು ಚೆನ್ನೈಯಲ್ಲಿ ನಿರ್ಮಾಣವಾಗಲಿರುವ ವೆಂಕಟೇಶ್ವರ-ಪದ್ಮಾವತಿ ದೇವಿಯ ಮಂದಿರಕ್ಕಾಗಿ 3.16 ಕೋಟಿ ರೂ. ದೇಣಿಗೆ ನೀಡಿದ್ದಾರೆ. ತಮಿಳುನಾಡಿನ ಉಳುಂದರುಪೆಟ್ಟೈ ಕ್ಷೇತ್ರದಲ್ಲಿ ಈ ದೇಗುಲ ನಿರ್ಮಾಣವಾಗಲಿದೆ. ಈ ಶಾಸಕರು ಕಳೆದ ಡಿಸೆಂಬರ್‌ ತಿಂಗಳಲ್ಲೂ ಯೋಜಿತ ಮಂದಿರಕ್ಕಾಗಿ 1 ಕೋಟಿ ರೂಪಾಯಿ ದಾನ ನೀಡಿದ್ದರು ಎನ್ನುವುದು ವಿಶೇಷ. ಕಂಚಿಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿಯವರು ಮಂದಿರಕ್ಕೆ ಅಡಿಪಾಯ ಹಾಕಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next