Advertisement

ಮಹಾರಾಷ್ಟ್ರ  ಜಲಾಶಯಗಳಿಂದ ಕೃಷ್ಣಾಗೆ 2 ಟಿಎಂಸಿ ನೀರು

08:12 AM Mar 11, 2017 | Team Udayavani |

ಬೆಳಗಾವಿ: ಕರ್ನಾಟಕದ ಗಡಿ ಭಾಗದಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ಏಪ್ರಿಲ್‌ ಒಂದರಿಂದ ಎರಡು ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ರಾಜ್ಯ ಬಿಜೆಪಿ ನಿಯೋಗಕ್ಕೆ ತಿಳಿಸಿದರು.

Advertisement

ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವ ಸಂಬಂಧ ರಾಜ್ಯದ ಬಿಜೆಪಿ ನಾಯಕರು ಶುಕ್ರವಾರ ಮುಂಬೈನಲ್ಲಿ ಅವರನ್ನು ಭೇಟಿ
ಮಾಡಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನೀರು ಬಿಡುಗಡೆಗೆ ತಕ್ಷಣ ಆದೇಶ ಹೊರಡಿಸಿದರು.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ತೆರಳಿದ ರಾಜ್ಯದ ಬಿಜೆಪಿ
ಶಾಸಕರ ನಿಯೋಗ, ಕೃಷ್ಣಾ ನದಿ ತೀರದ ಕರ್ನಾಟಕದ ಜನ ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು
ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿತು.

ಕರ್ನಾಟಕವು ಕಳೆದ ಎರಡು ವರ್ಷಗಳಿಂದ ಭೀಕರ ಬರಗಾಲ ಎದುರಿಸುತ್ತಿದೆ. ಅದರಲೂ ಉತ್ತರ ಕರ್ನಾಟಕದ ಕೃಷ್ಣಾ ನದಿ ತೀರದ ಜನ- ಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಮಹಾರಾಷ್ಟ್ರದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಎರಡು ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಪ್ರಭಾಕರ ಕೋರೆ ತಿಳಿಸಿದರು. 

ಕಳೆದ ವರ್ಷವೂ ಇದೇ ರೀತಿ ಭೀಕರ ಬರಗಾಲವಿದ್ದ ಸಂದರ್ಭದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಕೃಷ್ಣಾ ನದಿಗೆ ಉಚಿತ ನೀರು ಹರಿಸುವ ಮೂಲಕ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಇದಕ್ಕೆ ಉತ್ತರ ಕರ್ನಾಟಕದ ಜನರು ನಿಮಗೆ ಆಭಾರಿಯಾಗಿದ್ದಾರೆ. ಈ ಬಾರಿಯೂ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದು ನಿಯೋಗದಲ್ಲಿದ್ದ ಶಾಸಕ ಲಕ್ಷ್ಮಣ ಸವದಿ
ಉದಯವಾಣಿಗೆ ತಿಳಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಏ.1 ರಿಂದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲು ಒಪ್ಪಿದರು ಎಂದು ಹೇಳಿದರು.

ನಿಯೋಗದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ವಿಪ ಸದಸ್ಯಮಹಾಂತೇಶ ಕವಟಗಿಮಠ, ಶಾಸಕರಾದ ರಾಜು ಕಾಗೆ, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ , ಇಚಲಕರಂಜಿಯ ಶಾಸಕ ಸುರೇಶ ಹಳವಣಕರ ಹಾಗೂ ಬಿಜೆಪಿ ಮುಖಂಡ ಅಣ್ಣಾಸಾಬ ಜೊಲ್ಲೆ ಉಪಸ್ಥಿತರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next