Advertisement

ಬರ ಪೀಡಿತ ರೈತರಿಗೆ 2 ಸಾವಿರ ರೂ. ಪರಿಹಾರ: ರಾಜ್ಯ ಸರಕಾರದಿಂದ 105 ಕೋಟಿ ರೂ. ಬಿಡುಗಡೆ

01:07 AM Jan 06, 2024 | Vishnudas Patil |

ಬೆಂಗಳೂರು: ಹಲವು ಬಾರಿ ದಿಲ್ಲಿಗೆ ಭೇಟಿ ನೀಡಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದರೂ ಕೇಂದ್ರ ಸರಕಾರವು ಸ್ಪಂದಿಸಿಲ್ಲ ಎಂದು ಆರೋಪಿಸಿರುವ ರಾಜ್ಯ ಸರಕಾರವು ರೈತರಿಗೆ ನೆರವಾಗಲು ಮುಂದಾಗಿದ್ದು, ಮೊದಲ ಕಂತಾಗಿ ಬರ ಬಾಧಿತ ಪ್ರತೀ ರೈತನಿಗೆ ಗರಿಷ್ಠ 2 ಸಾವಿರ ರೂ.ಗಳ ವರೆಗೆ ಪರಿಹಾರದ ಮೊತ್ತ ಬಿಡುಗಡೆಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ರಾಜ್ಯದ 236 ತಾಲೂಕುಗಳ ಪೈಕಿ 223 ಬರದಿಂದ ತತ್ತರಿಸಿವೆ. ಸುಮಾರು 46 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ 35 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 18 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಸೆಪ್ಟಂಬರ್‌ನಲ್ಲೇ ಮನವಿ ಸಲ್ಲಿಸಿದ್ದರೂ ಇದುವರೆಗೆ ಕೇಂದ್ರದಿಂದ ಬಿಡಿಗಾಸು ಬಿಡುಗಡೆಯಾಗಿಲ್ಲ ಎಂದು ರಾಜ್ಯ ಸರಕಾರ ಹಲವು ಬಾರಿ ಆರೋಪಿಸಿದೆ.

ಕಳೆದ ತಿಂಗಳು ಕೂಡ ದಿಲ್ಲಿಗೆ ತೆರಳಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೆ ಪರಿಹಾರ ಬಿಡುಗಡೆಯಾಗಿಲ್ಲ ಎಂಬ ಬೇಸರ ಸಚಿವ ರಿಂದ ವಿವಿಧ ವೇದಿಕೆಗಳಲ್ಲಿ ವ್ಯಕ್ತವಾಗಿತ್ತು. ಇವೆಲ್ಲದರ ನಡುವೆ ರಾಜ್ಯ ಸರಕಾರವು ಈ ಹಿಂದೆ ಘೋಷಿಸಿದಂತೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ ಮೊದಲ ಕಂತಾಗಿ ಬರ ಪರಿಹಾರ ಮೊತ್ತ ಬಿಡುಗಡೆಗೊಳಿಸುವ ಮೂಲಕ ರೈತರ ನೆರವಿಗೆ ಧಾವಿಸಿದೆ.

ಕೇಂದ್ರ ಸರಕಾರದಿಂದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ) ಅಡಿ ಈವರೆಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಬೆಳೆಹಾನಿ ಪರಿಹಾರದ ಮೊದಲ ಕಂತಾಗಿ ಅಥವಾ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಪ್ರತೀ ರೈತನಿಗೆ ತಲಾ 2 ಸಾವಿರ ರೂ.ವರೆಗೆ ಪಾವತಿಸಲು ನಿರ್ಧರಿಸಲಾಗಿದೆ. ಈ ಸಂಬಂಧ 105 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್‌ನಲ್ಲೇ ಘೋಷಣೆ
2023-24ನೇ ಸಾಲಿನಲ್ಲಿ ಬರದಿಂದ ಶೇ. 33ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಹಾನಿಯಾದ ಮಳೆ ಯಾಶ್ರಿತ ರೈತರಿಗೆ ಬೆಳೆಹಾನಿ ಅರ್ಹತೆಯ ಅನುಗುಣವಾಗಿ ತಲಾ ಗರಿಷ್ಠ 2 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಫ‌ಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರ ಮೊತ್ತ ಜಮೆ ಆಗಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಕಳೆದ ನ. 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪರಿಹಾರದ ಈ ಮೊದಲ ಕಂತನ್ನು ಘೋಷಿಸಿದ್ದರು.
ವಾಸ್ತವವಾಗಿ ಕೇಂದ್ರ ಸರಕಾರ ಹೊರಡಿಸಿರುವ ನೈಸರ್ಗಿಕ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯ ಅನ್ವಯ ಅರ್ಹ ರೈತರಿಗೆ ಬರ ಪರಿಸ್ಥಿತಿಯಿಂದ ಶೇ. 33ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಉಂಟಾದ ಬೆಳೆಹಾನಿಗೆ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ 8,500 ರೂ., ನೀರಾವರಿ ಬೆಳೆಗೆ 17 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆಗೆ 22,500 ರೂ. ಇನ್‌ಪುಟ್‌ ಸಬ್ಸಿಡಿ ನಿಗದಿಪಡಿಸಲಾಗಿದೆ.

Advertisement

ಯಾಕೆ ಪರಿಹಾರ?
ರಾಜ್ಯದಲ್ಲಿ ಭಾರೀ ಬರ, ಸಂಕಟದಲ್ಲಿದ್ದಾರೆ ರೈತರು.
236 ತಾಲೂಕುಗಳ ಪೈಕಿ 223 ತಾಲೂಕುಗಳು ಬರದಿಂದ ತತ್ತರ.
18 ಸಾವಿರ ಕೋ.ರೂ. ಪರಿಹಾರ ನೀಡಲು ಕೇಂದ್ರಕ್ಕೆ ಮನವಿ.
ಸ್ಪಂದಿಸಿಲ್ಲ ಎಂದು ರಾಜ್ಯ ಸರಕಾರದ ಆರೋಪ.

ಯಾರಿಗೆಲ್ಲ ಪರಿಹಾರ?
2023-24ನೇ ಸಾಲಿನಲ್ಲಿ ಬರದ ಕಾರಣ ಶೇ. 33ರಷ್ಟು ಬೆಳೆಯನ್ನು ಕಳೆದುಕೊಂಡ ಮಳೆಯಾಶ್ರಿತ ರೈತರಿಗೆ ಸಿಗಲಿದೆ ನೆರವು.
ಅರ್ಹತೆಗೆ ಅನುಗುಣವಾಗಿ ತಲಾ ಗರಿಷ್ಠ ಎರಡು ಸಾವಿರ ರೂ. ಬಿಡುಗಡೆ, ಫ‌ಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ.

ಷರತ್ತುಗಳು

01ಈ ಬೆಳೆಹಾನಿ ಪರಿಹಾರಕ್ಕೆ ರೈತರ ನೋಂದಣಿ ಮತ್ತು ಏಕೀಕೃತ ಫ‌ಲಾನುಭವಿ ಮಾಹಿತಿ ವ್ಯವಸ್ಥೆ (ಫ‌ೂÅಟ್ಸ್‌ ಐಡಿ) ಕಡ್ಡಾಯವಾಗಿದೆ. ಹೀಗೆ ಫಾರ್ಮರ್ ಐಡಿ ಹೊಂದಿರುವ ಮತ್ತು ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಕೇಂದ್ರಕ್ಕೆ ಸಲ್ಲಿಸ ಲಾಗಿರುವ ಪ್ರಸ್ತಾವನೆಯಲ್ಲಿ ನಮೂದಾಗಿರುವ ಬೆಳೆ ಹಾನಿಗೆ ಒಳಪಟ್ಟಿರುವ ಬೆಳೆಗಳಿಗೆ ಸೀಮಿತಗೊಳಿಸಿ ಪರಿಹಾರ ನೀಡಲಾಗುತ್ತದೆ.

02ಫ‌ಲಾನುಭವಿಯು ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ ಮತ್ತಿತರ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

03ಆಧಾರ್‌ ಸಂಖ್ಯೆಯು ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರಬೇಕು.

04ಈಗಾಗಲೇ ನೀರಾವರಿ ಯೋಜನೆಗಳಿಗೆ ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡು ಪರಿಹಾರ ಪಡೆಯಲಾದ ಕೆಲವು ಪ್ರಕರಣಗಳಲ್ಲಿ ಇನ್ನೂ ಪಹಣಿಗಳಲ್ಲಿ ಇಲಾಖೆ ಹೆಸರು ಸೇರ್ಪಡೆಯಾಗಿಲ್ಲ. ಅಂತಹ ಪ್ರಕರಣಗಳನ್ನು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸುವಂತಿಲ್ಲ.

05ಜಂಟಿ ಖಾತೆದಾರರಾಗಿದ್ದಲ್ಲಿ ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ಪಾವತಿಸತಕ್ಕದ್ದು.

06ಒಂದೇ ಜಮೀನಿಗೆ ಬಹು ಮಾಲಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆಹಾನಿ ಪರಿಹಾರ ನೀಡುವಂತಿಲ್ಲ. ಫ್ರೂಟ್ ಅಡಿ ನೋಂದಣಿಯಾದ ಒಬ್ಬರಿಗೆ ಮಾತ್ರ ಪರಿಹಾರ.

Advertisement

Udayavani is now on Telegram. Click here to join our channel and stay updated with the latest news.

Next