Advertisement

New Delhi; ದಾರಿ ವಿಚಾರಕ್ಕೆ ಜಗಳ; ಅಮೇಜಾನ್ ಮ್ಯಾನೇಜರ್ ಗೆ ಗುಂಡಿಕ್ಕಿದ್ದ ಇಬ್ಬರ ಬಂಧನ

11:10 AM Aug 31, 2023 | Team Udayavani |

ಹೊಸದಿಲ್ಲಿ: ಅಮೆಜಾನ್‌ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ಹರ್‌ಪ್ರೀತ್ ಗಿಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಪೊಲೀಸರ ಮಾಹಿತಿಯಂತೆ, ಪ್ರಮುಖ ಆರೋಪಿಯನ್ನು ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ ಮತ್ತು ಮತ್ತೋರ್ವ ಆರೋಪಿಯನ್ನು ಬಿಲಾಲ್ ಗನಿ ಎಂದು ಹೆಸರಿಸಲಾಗಿದೆ. ಇಬ್ಬರೂ 18 ವರ್ಷ ಪ್ರಾಯದವರೆಂದು ಹೇಳಲಾಗಿದೆ.

ಇಂದು ಮುಂಜಾನೆ ಸುಮಾರು 2.00 ಗಂಟೆಗೆ ಸಿಗ್ನೇಚರ್ ಸೇತುವೆ ಬಳಿ ಬಿಲಾಲ್ ಗನಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಭಜನ್‌ ಪುರದ ಸುಭಾಷ್ ವಿಹಾರ್‌ ನಲ್ಲಿ ಹರ್‌ಪ್ರೀತ್ ಗಿಲ್ ಮತ್ತು ಅವರ ಸಂಬಂಧಿ ಗೋವಿಂದ್ ಸಿಂಗ್ (32) ಮೇಲೆ ಐವರು ಅಪರಿಚಿತರು ಗುಂಡು ಹಾರಿಸಿದ್ದರು.

ಇತರ ಮೂವರು ಸಹಚರರನ್ನು 23 ವರ್ಷದ ಸೊಹೈಲ್ ಅಲಿಯಾಸ್ ಬವರ್ಚಿ, 23 ವರ್ಷದ ಮೊಹಮ್ಮದ್ ಜುನೈದ್ ಅಲಿಯಾಸ್ ಬಿರಿಯಾನಿ ಮತ್ತು 19 ವರ್ಷದ ಅದ್ನಾನ್ ಅಲಿಯಾಸ್ ಡಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿಗಳೆಲ್ಲರೂ ಮಂಗಳವಾರ ರಾತ್ರಿ ಗನಿ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ನಂತರ, ಸುಮಾರು ರಾತ್ರಿ 10.30 ಕ್ಕೆ, ಅವರು ರೈಡ್ ಹೋಗಲು ನಿರ್ಧರಿಸಿದರು. ಈ ವೇಳೆ ಇಬ್ಬರು ಪಿಸ್ತೂಲ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಆರೋಪಿಗಳು ಎರಡು ಸ್ಕೂಟರ್‌ ಗಳಲ್ಲಿ ಸವಾರಿ ಮಾಡುತ್ತಿದ್ದರು ಮತ್ತು ಭಜನ್‌ಪುರ ಪ್ರದೇಶದ ಕಿರಿದಾದ ಬೈಲೇನ್‌ ಗಳೊಳಗೆ ತೆರಳಿದ್ದರು. ಈ ವೇಳೆ ಕಿರಿದಾದ ದಾರಿಯ ಸುಭಾಷ್ ವಿಹಾರ್ ನಲ್ಲಿ ಹರ್‌ಪ್ರೀತ್ ಗಿಲ್ ಮತ್ತು ಅವರ ಸಂಬಂಧಿ ಇನ್ನೊಂದು ಕಡೆಯಿಂದ ಬರುತ್ತಿದ್ದರು. ಅದು ಆರೋಪಿಗಳ ದಾರಿಯನ್ನು ತಡೆಯಿತು. ಐದು ಆರೋಪಿಗಳು ಅಮೆಜಾನ್ ಮ್ಯಾನೇಜರ್ ಮತ್ತು ಅವರ ಸಂಬಂದಿಯೊಂದಿಗೆ ಜಗಳವಾಡಿದ್ದಾರೆ.

ಇದಾದ ಕೆಲವೇ ಕ್ಷಣಗಳಲ್ಲಿ ಮೊಹಮ್ಮದ್ ಸಮೀರ್ ಹರ್ಪ್ರೀತ್ ಗಿಲ್ ಮತ್ತು ಆತನ ಸಂಬಂಧಿ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹರ್ಪ್ರೀತ್ ಗಿಲ್ ನಿಧನರಾಗಿದ್ದಾರೆಂದು ಆಸ್ಪತ್ರೆಯಲ್ಲಿ ಘೋಷಿಸಲಾಯಿತು. ಅವರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next