ಮುಂಬೈ-ಥಾಣೆ: ಕಳೆದ 24ಗಂಟೆಯ ಅವಧಿಯಲ್ಲಿ ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಗಾರ್ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಇದರ ಪರಿಣಾಮ ಮಹಾರಾಷ್ಟ್ರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ನೂರಾರು ಮರಗಳು ಉರುಳಿ ಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ, ಒಂದಿಷ್ಟು ವಿಷ ಕೊಟ್ಟುಬಿಡಿ, ಆದರೆ.. : ಆಟೋ ಚಾಲಕನ ಅಳಲು
ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಇಬ್ಬರು ವ್ಯಕ್ತಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಒಬ್ಬರ ಶವ ಪತ್ತೆಯಾಗಿದೆ. ಇನ್ನೊಬ್ಬ ವ್ಯಕ್ತಿಯ ಶವ ಪತ್ತೆಗಾಗ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಮರಗಳು ಉರುಳಿ ಬಿದ್ಥ ಪರಿಣಾಮ ಥಾಣೆ ಜಿಲ್ಲೆಯಲ್ಲಿ ಹಲವಾರು ಕಾರುಗಳು ಜಖಂಗೊಂಡಿವೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಥಾಣೆ ಜಿಲ್ಲೆಯ ಎನ್ ಆರ್ ಐ ಕಾಂಪ್ಲೆಕ್ಸ್ ನ ಆವರಣದ ಗೋಡೆ ಕುಸಿದು ಬಿದ್ದಿರುವುದಾಗಿ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಸೆಲ್ ನ ಮುಖ್ಯಸ್ಥ ಡಾ.ಬಾಬಾಸಾಹೇಬ್ ರಾಜಾಳೆ ಪಿಟಿಐಗೆ ತಿಳಿಸಿದ್ದಾರೆ.
ಥಾಣೆ ನಗರದಲ್ಲಿ 16 ವರ್ಷದ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಬೆಳಗ್ಗೆಯಿಂದ ಗುರುವಾರ (ಜೂ.29) ಬೆಳಗ್ಗೆ 8-30ರವರೆಗೆ ಥಾಣೆ ನಗರದಲ್ಲಿ ಬರೋಬ್ಬರಿ 200.08 ಮಿ.ಮೀಟರ್ ಮಳೆಯಾಗಿರುವುದಾಗಿ ವರದಿ ವಿವರಿಸಿದೆ.