ಜಮ್ಮು-ಕಾಶ್ಮೀರ: ಗಡಿಭಾಗದಲ್ಲಿ ಪಾಕಿಸ್ತಾನದ ಪುಂಡಾಟಿಕೆ ಮುಂದುವರಿದಿದ್ದು, ಗಡಿನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾದ ಘಟನೆ ಶುಕ್ರವಾರ(ನವೆಂಬರ್ 27, 2020) ರಜೌರಿಯ ಸುದೇರ್ ಬನಿ ಪ್ರದೇಶದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ಸುದೇರ್ ಬನಿ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಪ್ರಚೋದನಕಾರಿಯಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದನ್ನು ಮುಂದುವರಿಸಿದೆ.
ಜಮ್ಮು-ಕಾಶ್ಮೀರ ಮೂಲದ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇದರ್ ಆನಂದ್ ಮಾಧ್ಯಮಕ್ಕೆ ತಿಳಿಸಿರುವಂತೆ, ಶತ್ರು ದೇಶದ ಸೇನೆ ದಾಳಿ ನಡೆಸಿದ ವೇಳೆ ಕೂಡಲೇ ಪ್ರತಿಕ್ರಿಯೆ ನೀಡಬೇಕಾಗಿದ್ದು, ಅವರ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಪಾಕ್ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ನಾಯಕ್ ಪ್ರೇಮ್ ಬಹದೂರ್ ಖತ್ರಿ ಮತ್ತು ರೈಫಲ್ ಮ್ಯಾನ್ ಸುಖ್ ಬೀರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:
ಕೃಷಿ ನೀತಿಗೆ ವಿರೋಧ: ಬೃಹತ್ ಪ್ರತಿಭಟನೆ- ಆರು ರಾಜ್ಯಗಳ ರೈತರಿಗೆ ದೆಹಲಿ ಪ್ರವೇಶಿಸಲು ಅನುಮತಿ
ಪ್ರೇಮ್ ಬಹದೂರ್ ಖತ್ರಿ ಮತ್ತು ಸುಖ್ ಬೀರ್ ಸಿಂಗ್ ಸೇರಿದಂತೆ ಇಬ್ಬರು ಧೈರ್ಯಶಾಲಿಗಳು ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು ಎಂದು ದೇವೇಂದ್ರ್ ಆನಂದ್ ತಿಳಿಸಿದ್ದಾರೆ.