Advertisement

ವಿದ್ಯುತ್‌ ಸಂಪರ್ಕಕ್ಕೆ 2 ದಾಖಲೆ ಸಾಕು

11:48 PM Sep 17, 2020 | mahesh |

ಹೊಸದಿಲ್ಲಿ: ಇನ್ನು ಮುಂದೆ ವಿದ್ಯುತ್‌ ಬಳಕೆದಾರರು ಕೇವಲ 2 ದಾಖಲೆ ಗಳನ್ನು ನೀಡಿ ವಿದ್ಯುತ್‌ ಸಂಪರ್ಕ ಪಡೆಯಬಹುದು. ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯ ಸಿದ್ಧಪಡಿಸಿರುವ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. 10 ಕಿ.ವ್ಯಾ. ಸಾಮರ್ಥ್ಯದ ವರೆಗಿನ ವಿದ್ಯುತ್‌ ಸಂಪರ್ಕಕ್ಕೆ ಮತ್ತು 150 ಕಿ.ವ್ಯಾ. ಸಾಮರ್ಥ್ಯದ ವರೆಗಿನ ವಿದ್ಯುತ್‌ ಸಂಪರ್ಕಕ್ಕೆ ಕೇವಲ ಸರಳೀಕರಣಗೊಳಿಸಿದ ದಾಖಲೆಗಳನ್ನು ಸಲ್ಲಿಸಿದರೆ ಸಾಕು ಎಂದು ಉಲ್ಲೇಖೀಸಲಾಗಿದೆ. ಸದ್ಯ ಮೆಟ್ರೋ ನಗರಗಳಲ್ಲಿ ಹೊಸ ವಿದ್ಯುತ್‌ ಸಂಪರ್ಕಕ್ಕೆ 7 ದಿನಕ್ಕಿಂತ ಅಧಿಕ, ಇತರ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 15, ಗ್ರಾಮೀಣ ಪ್ರದೇಶಗಳಲ್ಲಿ 30 ದಿನಗಳು ಬೇಕಾಗುತ್ತಿವೆ.

Advertisement

ಗ್ರಾಹಕರು ನಗದು, ಚೆಕ್‌, ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಮಾಡಲು ಅವಕಾಶವಿದೆ ಎಂದು ಕರಡು ನಿಯಮಗಳಲ್ಲಿ ಉಲ್ಲೇಖೀಸಲಾಗಿದೆ. ಮನೆಯ ತಾರಸಿಯಲ್ಲಿ ಸೌರ ವಿದ್ಯುತ್‌ ಕೋಶ ಮತ್ತು ನೀರಾವರಿ ಪಂಪ್‌ ಸೆಟ್‌ಗಳನ್ನು ಹೊಂದಿರುವ ವಿದ್ಯುತ್‌ ಬಳಕೆದಾರರನ್ನು “ಪ್ರೊಸ್ಯೂಮರ್ಸ್‌’ ಎಂದು ಕರೆಯಲು ನಿರ್ಧರಿಸಲಾಗಿದೆ. ಅಂಥವರಿಗೆ ತಮಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್‌ ಉತ್ಪಾದನೆ ಮಾಡಲು ಆಯಾ ರಾಜ್ಯಗಳ ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರಗಳು ಸೂಚಿಸಿದಂತೆ ಅನುಮತಿ ಕೊಡಲಾಗುತ್ತದೆ.

ವಿದ್ಯುತ್‌ ವಿತರಣಾ ಕಂಪನಿಗಳಿಂದ ಬಳಕೆದಾರರಿಗೆ ನೀಡುವ ಸೇವೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಪರಿಹಾರ ನೀಡಲೂ ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಗ್ರಾಹಕರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ 24 ಗಂಟೆಗಳ ಕಾಲ ಕೆಲಸ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂದು ಕರಡು ನಿಯಮಗಳಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next