ನವದೆಹಲಿ: ಕರ್ತವ್ಯ ನಿರತ ಪೊಲೀಸ್ ಕಾನ್ಸ್ ಟೇಬಲ್ ಏಕಾಏಕಿ ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ (ಜೂನ್ 10) ಕೋಲ್ಕತಾದ ಬಾಂಗ್ಲಾದೇಶ್ ಹೈಕಮಿಷನ್ ಹೊರಭಾಗದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿಯನ್ನು ಗೆಲುವಿನ ದಡ ಹತ್ತಿಸಿದ ‘ಆತ್ಮಸಾಕ್ಷಿ’ಯ ಮತ; ಸೋತರೂ ಗೆದ್ದ ಸಿದ್ದರಾಮಯ್ಯ
ಗುಂಡಿನ ದಾಳಿ ನಡೆಸಿದ ನಂತರ ಪೊಲೀಸ್ ಕಾನ್ಸ್ ಟೇಬಲ್ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಯಾವ ಕಾರಣದಿಂದ ಪೊಲೀಸ್ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಬಾಂಗ್ಲಾದೇಶ್ ಹೈಕಮಿಷನ್ ಕಚೇರಿಯ ಹೊರಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿ ಕನಿಷ್ಠ ಹತ್ತು ಸುತ್ತುಗಳ ಗುಂಡು ಹಾರಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಸ್ಥಳೀಯ ನಿವಾಸಿ ಕೂಡಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಪೊಲೀಸ್ ಸಿಬ್ಬಂದಿ ಏಕಾಏಕಿ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ತಾನು ಆಡುಗಳಿಗೆ ಮೇವು ಹಾಕುತ್ತಿದ್ದೆ. ಗುಂಡಿನ ದಾಳಿಯ ಶಬ್ದಕ್ಕೆ ಹೆದರಿ ತಾನು ಗ್ಯಾರೇಜ್ ನೊಳಗೆ ಓಡಿ ಬಾಗಿಲು ಹಾಕಿಕೊಂಡಿರುವುದಾಗಿ ಸ್ಥಳೀಯ ನಿವಾಸಿ ಅರಾಫತ್ ಮೊಲ್ಲಾಹ್ ತಿಳಿಸಿದ್ದಾರೆ.