Advertisement

ಕಾಪು ಪಾಲಿಟೆಕ್ನಿಕ್‌ಗೆ 2 ಹೊಸ ಕೋರ್ಸ್‌

12:26 AM Aug 02, 2021 | Team Udayavani |

ಕಾಪು: ಬೆಳಪುವಿನಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಆಟೋಮೇಶನ್‌ ಆ್ಯಂಡ್‌ ರೋಬೋಟಿಕ್ಸ್‌ ಮತ್ತು ಕೌÉಡ್‌ ಕಂಪ್ಯೂಟಿಂಗ್‌ ಆ್ಯಂಡ್‌ ಬಿಗ್‌ ಡೇಟಾ ಡಿಪ್ಲೊಮಾ ಹೆಸರಿನ 2 ಹೊಸ ಕೋರ್ಸ್‌ಗಳು ಮಂಜೂರಾಗಿದ್ದು, ಪ್ರಸಕ್ತ ಸಾಲಿನಲ್ಲಿ ಆರಂಭವಾಗಲಿವೆ.

Advertisement

ರಾಜ್ಯದ ಸರಕಾರಿ ಪಾಲಿ ಟೆಕ್ನಿಕ್‌ ಕಾಲೇಜುಗಳ ಪೈಕಿ ಈ ಎರಡು ಹೊಸ ಕೋರ್ಸ್‌ಗಳು ಆರಂಭವಾಗುತ್ತಿರುವ ಏಕೈಕ ಕಾಲೇಜು ಇದಾಗಿದ್ದು, ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಶನ್‌ (ಎಐ ಸಿಟಿಇ) ಅನುಮೋದನೆ ಲಭಿಸಿದೆ. ಮೂಲಸೌಕರ್ಯಕ್ಕೆ 5 ಕೋ.ರೂ.

5.39 ಎಕ್ರೆಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಾಲೇಜು ಉಡುಪಿ ಜಿಲ್ಲೆಯ 3ನೇ ಮತ್ತು ಕಾಪು ತಾಲೂಕಿನ ಪ್ರಥಮ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಾಗಿದೆ. ಕಂಪ್ಯೂಟರ್‌, ಪೀಠೊಪಕರಣಗಳು, ಪ್ರಯೋಗಾಲಯ, ಗ್ರಂಥಾಲಯ, ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿತ ಯಂತ್ರೋ ಪಕರಣಗಳ ಜೋಡಣೆಗೆ 5 ಕೋಟಿ ರೂ. ಮೀಸಲಿಡಲಾಗಿದೆ. ವರ್ಕ್‌ ಶಾಪ್‌, ಬಾಲಕ/ಬಾಲಕಿಯರ ವಸತಿ ನಿಲಯ, ಕೆಫೆಟೇರಿಯಾ, ಭದ್ರತಾ  ಪರಿಕರಗಳ ಜೋಡಣೆ, ಆವರಣಗೋಡೆ ಮತ್ತು ಗೇಟ್‌ ಅಳವಡಿಕೆ ಇನ್ನಷ್ಟೇ ನಡೆಯಬೇಕಿದೆ.

ಸ್ಥಳೀಯರಿಗೆ ಆದ್ಯತೆಗೆ ಮನವಿ:

ಬೆಳಪು ಗ್ರಾಮ ಶೈಕ್ಷಣಿಕವಾಗಿ ಬೆಳೆಯಬೇಕೆಂಬ ಬಹುಕಾಲದ ಕನಸೊಂದು ನನಸಾಗುತ್ತಿದೆ.  ಹೊಸ ಕೋರ್ಸ್‌ಗಳೊಂದಿಗೆ ಕಾಲೇಜು ಆರಂಭಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳ ಆಯ್ಕೆಯಲ್ಲಿ ಮತ್ತು ಪೂರಕ ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸರಕಾರ ಮತ್ತು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

ಆಟೋಮೇಷನ್‌ ಆ್ಯಂಡ್‌ ರೋಬೋಟಿಕ್ಸ್‌  :

ಆಧುನಿಕ ಕಾಲಘಟ್ಟದಲ್ಲಿ ಮಾನವ ಸಂಪದದ ಬಳಕೆ ಕಡಿಮೆಯಾಗುತ್ತಿದ್ದು ಕೈಗಾರಿಕೆಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ರೋಬೋಟ್‌ಗಳ ಉಪಯೋಗ ಹೆಚ್ಚುತ್ತಿದೆ. ಆಟೋಮೇಶನ್‌ ಆ್ಯಂಡ್‌ ರೋಬೋಟಿಕ್ಸ್‌ ಕೋರ್ಸ್‌ನಿಂದಾಗಿ ಗ್ರಾಮೀಣ ಯುವಕ – ಯುವತಿಯರಿಗೆ ರೋಬೋಟ್‌ ತಂತ್ರಜ್ಞಾನ, ರೊಬೋಟ್‌ ಡಿಸೈನಿಂಗ್‌, ಆಟೋಮೇಷನ್‌ ಮತ್ತು ನಿರ್ವಹಣೆ ಬಗ್ಗೆ ತಿಳಿದುಕೊಂಡು ತಂತ್ರಜ್ಞಾನ ಆಧಾರಿತವಾಗಿಯೂ ಬೆಳೆಯಲು ಅವಕಾಶವಿದೆ.

ಕ್ಲೌಡ್‌ ಕಂಪ್ಯೂಟಿಂಗ್‌ ಆ್ಯಂಡ್‌ ಬಿಗ್‌ ಡೇಟಾ ಡಿಪ್ಲೊಮಾ :

 

ಮಾಹಿತಿ ತಂತ್ರಜ್ಞಾನ ಮತ್ತು ದತ್ತಾಂಶಗಳ ಸಂಗ್ರಹಣೆಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಚಾಲನ ಪರವಾನಿಗೆ, ಬ್ಯಾಂಕಿಂಗ್‌ ಸೇರಿದಂತೆ ಎಲ್ಲವೂ ಡಿಜಿಟಲೀಕರಣವಾಗಿರುವುದರಿಂದ ಮಾಹಿತಿಗಳ ಸಂಗ್ರಹಣೆ ಮತ್ತು ಸಮರ್ಪಕ ನಿರ್ವಹಣೆಗೆ ಕ್ಲೌಡ್‌ ಕಂಪ್ಯೂಟಿಂಗ್‌ ಆ್ಯಂಡ್‌ ಬಿಗ್‌ ಡೇಟಾ ಡಿಪ್ಲೊಮಾ ಕೋರ್ಸ್‌ ಬಹಳಷ್ಟು ಉಪಯುಕ್ತವಾಗಲಿದೆ. ಮಾಹಿತಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗದ ಬಗ್ಗೆ ಪರಿಪೂರ್ಣ ಅನುಭವ ಪಡೆದುಕೊಂಡು ಸರ್ವರ್‌ ಬಳಕೆ, ಪ್ರೋಗ್ರಾಮಿಂಗ್‌ ಬಗ್ಗೆಯೂ ತಿಳಿದುಕೊಳ್ಳಲು ಅವಕಾಶವಿದೆ.

ಎರಡೂ ಕೋರ್ಸ್‌ಗಳಿಗೆ ದೇಶ-ವಿದೇಶಗಳಲ್ಲಿ ಬಹಳಷ್ಟು ಬೇಡಿಕೆಯಿದ್ದು ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗವಕಾಶಕ್ಕೂ ಹೆಚ್ಚಿನ ಅನುಕೂಲವಾಗಲಿದೆ.

120 ಮಂದಿಗೆ ಅವಕಾಶ :

2 ಕೋರ್ಸ್‌ಗಳಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಅವಕಾಶ ಇದ್ದು, ಆನ್‌ಲೈನ್‌ ಮೂಲಕ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಕಾಲೇಜಿಗೆ ಆಗಮಿಸಿ ಅರ್ಜಿ ಸಲ್ಲಿಸುವುದಕ್ಕೂ ಅವಕಾಶವಿದೆ. ಕೆಟಗರಿ, ಮೀಸಲಾತಿ ಮತ್ತು ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆಯಾಗಲಿದೆ. ರಾಜ್ಯದ ಯಾವುದೇ ಜಿಲ್ಲೆಯ ವಿದ್ಯಾರ್ಥಿಗೂ ಅವಕಾಶವಿದ್ದು, ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಿಂದ ಅರ್ಜಿಗಳನ್ನು  ಪಡೆದುಕೊಳ್ಳಬಹುದು. –  ಮಂಜುನಾಥ್‌ ಪ್ರಸಾದ್‌,   ಸ್ಪೆಷಲ್‌ ಆಫೀಸರ್‌,  ಬೆಳಪು ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next