Advertisement

KSRTC ಇನ್ನೂ 2 ತಿಂಗಳು ಕೆಟ್ಟು ನಿಲ್ಲುವ ಬಸ್‌ಗಳನ್ನು ಸಹಿಸಿಕೊಳ್ಳಬೇಕು!

01:23 AM Apr 22, 2024 | Team Udayavani |

ಬಂಟ್ವಾಳ: ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳು ಪದೇಪದೆ ಕೆಟ್ಟು ರಸ್ತೆ ಬದಿ ನಿಲ್ಲುತ್ತಿರುವ ದೂರುಗಳು ಕೇಳಿಬರುತ್ತಿವೆ.

Advertisement

ಇದಕ್ಕೆ ಪ್ರತಿಯಾಗಿ ಮುಂದಿನ ಜೂನ್‌ನಲ್ಲಿ ಮಂಗಳೂರು ಹಾಗೂ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳಿಗೆ 85 ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ಗಳು ಬರುತ್ತಿರುವುದರಿಂದ ಕೆಟ್ಟು ನಿಲ್ಲುವ ಬಸ್‌ಗಳನ್ನು ಬದಲಾಯಿಸಿಲ್ಲ. ಹೊಸ ಬಸ್‌ ಬಂದ ಬಳಿಕ ಹಳೆಯ ಬಸ್‌ಗಳು ಬದಲಾಗಲಿವೆ ಎನ್ನುತ್ತವೆ ಕೆಎಸ್ಸಾರ್ಟಿಸಿ ಮೂಲಗಳು.

ಮಂಗಳೂರು(ಸ್ಟೇಟ್‌ಬ್ಯಾಂಕ್‌) -ಧರ್ಮಸ್ಥಳ ಮಾರ್ಗದಲ್ಲೇ ಹೆಚ್ಚಿನ ಬಸ್‌ಗಳು ಕೆಟ್ಟು ರಸ್ತೆ ಬದಿ ನಿಲ್ಲುತ್ತಿವೆ ಎಂಬ ಆರೋಪವಿದ್ದು, ಮುಂದಿನ ದಿನಗಳಲ್ಲಿ ಇದೇ ಮಾರ್ಗದಲ್ಲಿ ಸುಮಾರು 30 ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸಲಿವೆ.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಕ್ಕೆ 45 ಹಾಗೂ ಪುತ್ತೂರು ವಿಭಾಗಕ್ಕೆ 40 ಎಲೆಕ್ಟ್ರಿಕ್‌ ಬಸ್‌ಗಳು ಜೂನ್‌ನಲ್ಲಿ ಆಗಮಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಪುತ್ತೂರು ವಿಭಾಗದಲ್ಲಿ 20 ಎಲೆಕ್ಟ್ರಿಕ್‌ ಬಸ್‌ಗಳನ್ನು ಧರ್ಮಸ್ಥಳ ಡಿಪೋಗೆ ನೀಡಿ ಧರ್ಮಸ್ಥಳ-ಮಂಗಳೂರು ಮಧ್ಯೆ ಸಂಚಾರಕ್ಕೆ ನಿಯೋಜಿಸಲಾಗುವುದು. ಜತೆಗೆ ಮಂಗಳೂರು ವಿಭಾಗದ ಬಸ್‌ಗಳಲ್ಲಿ 10 ಧರ್ಮಸ್ಥಳ-ಮಂಗಳೂರು ಮಧ್ಯೆ ಓಡಾಡಲಿದ್ದು, ಹೀಗಾಗಿ ಧರ್ಮಸ್ಥಳ-ಮಂಗಳೂರು ಮಧ್ಯೆ ಒಟ್ಟು 30 ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸಲಿವೆ.

ಹಾಲಿ ಧರ್ಮಸ್ಥಳ-ಮಂಗಳೂರು 46 ಶೆಡ್ಯೂಲ್ ಗ‌ಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ಮುಂದೆ ಎಲೆಕ್ಟ್ರಿಕ್‌ ಬಸ್‌ಗಳು ಓಡಾಟ ಆರಂಭಿಸಿದ ಬಳಿಕ ಇವುಗಳ ಸಂಖ್ಯೆ 60ಕ್ಕೇರಲಿದೆ. ಉಳಿದಂತೆ ಪುತ್ತೂರು ವಿಭಾಗದ ಎಲೆಕ್ಟ್ರಿಕ್‌ ಬಸ್‌ಗಳು ಪುತ್ತೂರು- ಮಂಗಳೂರು, ಪುತ್ತೂರು-ಸುಳ್ಯ ಮಾರ್ಗಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ. ಮಂಗಳೂರು ವಿಭಾಗದ ಎಲೆಕ್ಟ್ರಿಕ್‌ ಬಸ್‌ಗಳ ಪೈಕಿ ತಲಾ 10 ಬಸ್‌ಗಳು ಮಂಗಳೂರು-ಕಾಸರಗೋಡು, ಮಂಗಳೂರು-ಉಡುಪಿ-ಮಣಿಪಾಲ, ಭಟ್ಕಳ- ಬೈಂದೂರು ರೂಟ್‌ಗಳಲ್ಲಿ ಸಂಚರಿಸಲಿವೆ.

Advertisement

12 ಲಕ್ಷ ಕಿ.ಮೀ. ಓಡಾಟ: ಸಾಮಾನ್ಯವಾಗಿ ಕೆಎಸ್ಸಾರ್ಟಿಸಿಯು 15 ವರ್ಷ ಪೂರ್ತಿಗೊಳಿಸಿದ ಬಸ್‌ಗಳನ್ನು ನಿಯಮದಂತೆ ರಸ್ತೆಗಿಳಿಸುವುದಿಲ್ಲ. ಆದರೆ ಮಂಗ ಳೂರು-ಧರ್ಮಸ್ಥಳ ಮಧ್ಯೆ ಓಡಾಡುವ ಬಸ್‌ಗಳಿಗೆ 7-8 ವರ್ಷವಾಗಿದ್ದು, 12 ಲಕ್ಷ ಕಿ.ಮೀ.ಗಳಿಗೂ ಹೆಚ್ಚಿನ ಓಡಾಟ ನಡೆಸಿರುವುದರಿಂದ ಪದೇ ಪದೆ ಕೆಟ್ಟು ನಿಲ್ಲುತ್ತಿವೆ ಎನ್ನಲಾಗಿದೆ.

ಒಂದಷ್ಟು ಬಸ್‌ಗಳು ಟಯರ್‌ ಒಡೆದು, ಪಂಕ್ಚರ್‌ನಿಂದ ಕೆಟ್ಟು ನಿಂತರೆ ಇನ್ನೊಂದಷ್ಟು ಬಸ್‌ಗಳು ಹೆಚ್ಚಿನ ಬಿಸಿಯಾಗಿ ಬಾಯ್ಲಿಂಗ್‌ ಸಮಸ್ಯೆಯಿಂದ ಕೆಟ್ಟು ನಿಲ್ಲುತ್ತಿವೆ. ಕೆಲವೊಂದು ಬಾರಿ ಬಿ.ಸಿ.ರೋಡು-ಧರ್ಮಸ್ಥಳ ಮಧ್ಯೆಯೇ ಮೂರಕ್ಕೂ ಅಧಿಕ ಬಸ್‌ಗಳು ಕೆಟ್ಟು ನಿಂತ ಉದಾಹರಣೆಗಳಿವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಬಸ್‌ಗಳು 12 ಲಕ್ಷ ಕಿ.ಮೀ.ಗೂ ಅಧಿಕ ಓಡಾಟ ನಡೆಸಿರುವುದರಿಂದ ಕೆಟ್ಟು ನಿಲ್ಲುತ್ತಿವೆ. ಜೂನ್‌ ವೇಳೆಗೆ ಮಂಗಳೂರು ಹಾಗೂ ಪುತ್ತೂರು ವಿಭಾಗಕ್ಕೆ 85 ಎಲೆಕ್ಟ್ರಿಕ್‌ ಬಸ್‌ಗಳು ಆಗಮಿಸಲಿದ್ದು, ಬಳಿಕ ಸಮಸ್ಯೆ ಸರಿಹೋಗಲಿದೆ. ಆಗ ಗುಣಮಟ್ಟ ಕಡಿಮೆ ಇರುವ ಬಸ್‌ಗಳನ್ನು ಬದಲಾಯಿಸಲಾಗುತ್ತದೆ.
– ರಾಜೇಶ್‌ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ, ಮಂಗಳೂರು ವಿಭಾಗ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next