ಕೋಲ್ಕತಾ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಭಾನುವಾರ ನಸುಕಿನ ವೇಳೆ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಫರ್ಜಾನ್ ಎಸ್‌ಕೆ (45) ಮತ್ತು ಸಫಿಕುಲ್ ಇಸ್ಲಾಂ (30) ಎಂದು ಗುರುತಿಸಲಾಗಿದ್ದು, ಮಾಣಿಕ್‌ಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಜೆಸರತ್ತಲಾ ಬಲುತೋಲಾ ಎಂಬಲ್ಲಿನ ಹೊಲವೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಆಕಸ್ಮಿಕ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸ್ಥಳೀಯರು ಬೆಳಗಿನ ಜಾವ 2.30ರ ಸುಮಾರಿಗೆ ಭಾರೀ ಸ್ಫೋಟದ ಸದ್ದು ಕೇಳಿದ್ದು, ಪೊಲೀಸ್ ನಮ್ಮ ಸಿಬ್ಬಂದಿ ಪ್ರದೇಶವನ್ನು ತಲುಪುವ ವೇಳೆಗೆ, ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯ ವೈದ್ಯರು ಅವರಲ್ಲಿ ಇಬ್ಬರನ್ನು ಮೃತ ಎಂದು ಘೋಷಿಸಿದರೆ, ಮತ್ತೊಬ್ಬರು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳದಲ್ಲಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಲು ಬಳಸುತ್ತಿದ್ದ ಕೆಲವು ಕಚ್ಚಾ ವಸ್ತುಗಳು ಪತ್ತೆಯಾಗಿವೆ. ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಸಲಾಗುತ್ತಿದೆ, ಶುಕ್ರವಾರ ಈ ಪ್ರದೇಶದಿಂದ ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದ ಕೆಲವು ವಾರಗಳಿಂದ ಆಡಳಿತಾರೂಢ ಟಿಎಂಸಿಯಲ್ಲಿ ಜಮೀನು ವಿಚಾರದಲ್ಲಿ ಬಣ ಜಗಳ ನಡೆಯುತ್ತಿದ್ದು, ಈ ಪ್ರದೇಶ ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.