ಬೆಂಗಳೂರು: ಪ್ರಕರಣವೊಂದರ ವಿಚಾರಣೆ ವೇಳೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರ ವಿರುದ್ಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿರುವ ಹೈಕೋರ್ಟ್, ವಕೀಲರಿಗೆ 2 ಲಕ್ಷ ರೂ. ದಂಡ ವಿಧಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಕೆ.ಎನ್. ಜಗದೀಶ್ ಬೇಷರತ್ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸಿದ್ದಲ್ಲದೆ, ನ್ಯಾಯಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕ್ಷಮಾಪಣಾ ಪತ್ರ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅವರ ವಿರುದ್ಧದದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿತು.
ಆದರೆ, ನ್ಯಾಯಾಲದಲ್ಲಿ ಅನುಚಿತವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಅವರಿಗೆ 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಪೀಠ, 1 ಲಕ್ಷ ರೂ. ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ, 50 ಸಾವಿರ ರೂ. ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ಮತ್ತು 50 ಸಾವಿರ ರೂ. ಹೈಕೋರ್ಟ್‌ನ ಗುಮಾಸ್ತರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮುಂದಿನ 2 ವಾರಗಳಲ್ಲಿ ಪಾವತಿಸಬೇಕು. ಹೈಕೋರ್ಟ್ ಆದೇಶ ಪಾಲಿಸಿದ ಬಗ್ಗೆ ಡಿ.16ರಂದು ನ್ಯಾಯಾಲಯಕ್ಕೆ ವಿವರಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ
ಪ್ರಕರಣವೊಂದರ ವಿಚಾರಣೆಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲ ಜಗದೀಶ್ ನ್ಯಾಯಾಲಯದಲ್ಲಿ ವಿಚಾರಣೆಗೆ ಅಡ್ಡಿ ಪಡಿಸಿದ್ದರು. ಅಲ್ಲದೆ, ನ್ಯಾಯಾಲಯದಲ್ಲಿ ಟೇಬಲ್ ಮೇಲೆ ಗುದ್ದಿ ಗದ್ದಲವುಂಟು ಮಾಡಿದ್ದರು. ನ್ಯಾಯಾಧೀಶರು ಹಲವು ಬಾರಿ ಸೂಚನೆ ನೀಡಿದರೂ ಗಲಾಟೆ ಮುಂದುವರಿಸಿದ್ದರು.
ಈ ಕುರಿತಂತೆ ಜಗದೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಹೈಕೋರ್ಟ್ ಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಇದೀಗ ದಂಡ ವಿಧಿಸಿ ಪ್ರಕರಣವನ್ನು ಕೈಬಿಟ್ಟಿದೆ.