ಇಸ್ಲಾಮಾಬಾದ್:ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದೊಂದಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಮಹತ್ವದ ಮಾತುಕತೆಗೆ ದಿನಗಣನೆ ಆರಂಭವಾಗಿರುವಂತೆಯೇ, ಪಾಕಿಸ್ತಾನದ 2022-23ರ ಬಜೆಟ್ ಅಂದಾಜಿನಲ್ಲೇ 2 ಲಕ್ಷ ಕೋಟಿ ಪಾಕಿಸ್ತಾನ ರೂಪಾಯಿಗಳ ಉಲ್ಲಂಘನೆ ಆಗಿರುವುದು ಪತ್ತೆಯಾಗಿದೆ. ಐಎಂಎಫ್ ನಡೆಸಿದ ಆರಂಭಿಕ ಮೌಲ್ಯಮಾಪನದಲ್ಲಿ ಈ ಅಕ್ರಮ ಪತ್ತೆಯಾಗಿದ್ದು, ಇದು ಪಾಕ್‌ನ ಆಯವ್ಯಯ ಕೊರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಮಂಗಳವಾರದಿಂದಲೇ ಪಾಕ್ ಮತ್ತು ಐಎಂಎಫ್ ಅಧಿಕಾರಿಗಳ ನಡುವೆ ಮಾತುಕತೆ ಆರಂಭವಾಗಲಿದೆ. ಪಾಕಿಸ್ತಾನಕ್ಕೆ ಹೆಚ್ಚುವರಿ ಹಣಕಾಸು ನೆರವು ಒದಗಿಸಬೇಕೇ, ಬೇಡವೇ ಎಂಬುದು ಈ ಮಾತುಕತೆ ವೇಳೆ ನಿರ್ಧಾರವಾಗಲಿದೆ. ಸೆಪ್ಟೆಂಬರ್ ತಿಂಗಳಿಂದಲೂ ಬಾಕಿಯಿರುವ ಹಣಕಾಸು ನೆರವಿನ ಬಾಕಿ ಮೊತ್ತದ ಬಿಡುಗಡೆಯು ಈ ಮಾತುಕತೆಯನ್ನು ಅವಲಂಬಿಸಿದೆ.
ಪಾಕಿಸ್ತಾನದ ಮೀಸಲು ನಿಧಿಯು 3.7 ಶತಕೋಟಿ ಡಾಲರ್‌ಗೆ ಇಳಿದಿದ್ದು, ಸುಸ್ತಿದಾರನ ಸ್ಥಾನದಿಂದ ತಪ್ಪಿಸಿಕೊಳ್ಳಬೇಕೆಂದರೆ ಆ ದೇಶಕ್ಕೆ ತುರ್ತು ನೆರವಿನ ಅಗತ್ಯವಿದೆ. ಸದ್ಯಕ್ಕೆ ದೇಶವನ್ನು ಕಾಪಾಡಲು ಐಎಂಎಫ್ ನಿಂದ ಮಾತ್ರ ಸಾಧ್ಯ. ಆದರೆ, ದೇಶವು ಯಾವುದೇ ದೀರ್ಘಾವಧಿಯ ಯೋಜನೆಯನ್ನು ಹಾಕಿಕೊಂಡಿರದ ಕಾರಣ, ಮುಂದೆ ಇದೇ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾದರೆ ದೇಶದ ಭವಿಷ್ಯವೇನು ಎನ್ನುವುದು ಹಲವು ನಾಗರಿಕರ ಪ್ರಶ್ನೆಯಾಗಿದೆ. 2019ರಲ್ಲಿ ಪಾಕಿಸ್ತಾನವು ಐಎಂಎಫ್ ನಿಂದ 6 ಶತಕೋಟಿ ಡಾಲರ್ ಆರ್ಥಿಕ ಸಹಾಯವನ್ನು ಪಡೆದಿತ್ತು. 2022ರಲ್ಲಿ ಭಾರೀ ಪ್ರವಾಹದಿಂದ ಪಾಕ್ ಸಂಕಷ್ಟಕ್ಕೊಳಗಾದ ಕಾರಣ ಮತ್ತೆ 1.1 ಶತಕೋಟಿ ಡಾಲರ್ ಅನ್ನು ಐಎಂಎಫ್ ಒದಗಿಸಿತ್ತು. ಹೀಗಿದ್ದರೂ, ಆರ್ಥಿಕ ಬಲವರ್ಧನೆಯಲ್ಲಿ ಪಾಕ್ ವಿಫಲಗೊಂಡ ಕಾರಣ ಕಳೆದ ನವೆಂಬರ್‌ನಿಂದ ಐಎಂಎಫ್ ನೆರವನ್ನು ಸ್ಥಗಿತಗೊಳಿಸಿತ್ತು.