ಬೀದರ: ಜಿಲ್ಲೆಯಲ್ಲಿ ಎರಡು ಲಕ್ಷ ಕಾಂಗ್ರೆಸ್ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾಹಿತಿ ನೀಡಿದರು.
ಸದಸ್ಯತ್ವ ಅಭಿಯಾನ ಕುರಿತು ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನ ಮಾರ್ಚ್ 31ರ ವರೆಗೆ ನಡೆಯಲಿದೆ. ಜಿಲ್ಲೆಯ ಬೀದರ, ಭಾಲ್ಕಿ, ಹುಮನಾಬಾದ, ಬಸವಕಲ್ಯಾಣ, ಔರಾದ ಹಾಗೂ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿಯಾನ ಉತ್ಸಾಹದಿಂದ ನಡೆದಿದೆ ಎಂದು ಹೇಳಿದರು.
ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರು ಹೆಚ್ಚು ಹೆಚ್ಚು ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಿಸಬೇಕು. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು ಆಗಿದೆ. ಇದರಿಂದ ಜಿಲ್ಲೆಯಲ್ಲಿ ಪಕ್ಷದ ಶಕ್ತಿ ವೃದ್ಧಿಯಾಗಿದೆ ಎಂದು ಹೇಳಿದರು.
ಸದಸ್ಯತ್ವ ಅಭಿಯಾನದ ಉಸ್ತುವಾರಿ ಶರಣಕುಮಾರ ಮೋದಿ ಮಾತನಾಡಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಬ್ಲಾಕ್ ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾದ ಕನಿರಾಮ ರಾಠೊಡ್, ಮಾಣಿಕ ರೆಡ್ಡಿ, ಗೋಪಿಕೃಷ್ಣ, ಶಾಮ ನಾಟಿಕರ್ ಇನ್ನಿತರರಿದ್ದರು.