ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ವ್ಯಾಪಿಸುವಿಕೆಯ ವೇಗ ದಿನ ಕಳೆದಂತೆ ಹೆಚ್ಚುತ್ತಿದ್ದು, ಕೇವಲ ಜೂನ್ ತಿಂಗಳೊಂದರಲ್ಲೇ 3.86 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ವಿಶ್ವದ ಕೋವಿಡ್ ಹಾಟ್‌ಸ್ಪಾಟ್ ದೇಶಗಳ ಪೈಕಿ ಅಮೆರಿಕ, ಬ್ರೆಜಿಲ್ ಮತ್ತು ರಷ್ಯಾದ ಅನಂತರದ ಸ್ಥಾನದಲ್ಲಿ ಭಾರತವಿದ್ದು, ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚುತ್ತಾ ಹೋದರೆ ಮುಂದಿನ ಒಂದೇ ವಾರದಲ್ಲಿ ನಾವು ರಷ್ಯಾವನ್ನೂ ಹಿಂದಿಕ್ಕಿ 3ನೇ ಸ್ಥಾನಕ್ಕೇರುವ ಆತಂಕವಿದೆ.
ಮೇ 31ರಂದು ಭಾರತದಲ್ಲಿ 1.98 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿತ್ತು. ಅನಂತರದ ಒಂದು ತಿಂಗಳಲ್ಲಿ ಈ ಸಂಖ್ಯೆ 5.85 ಲಕ್ಷಕ್ಕೇರಿಕೆಯಾಯಿತು. ಕಳೆದ 12 ದಿನಗಳಲ್ಲೇ 2 ಲಕ್ಷ ಸೋಂಕಿತರನ್ನು ದೇಶ ಕಂಡಿದೆ. ಮೇ ಅಂತ್ಯದಲ್ಲಿ 97 ಸಾವಿರವಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 2.2 ಲಕ್ಷಕ್ಕೇರಿದ್ದು, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವಾಕರ್ತರಿಗೆ ಅತಿ ದೊಡ್ಡ ಸವಾಲು ಎದುರಾಗಿದೆ.
ಸಾವಿನ ಸಂಖ್ಯೆಯೂ ಹೆಚ್ಚಳ: ಜೂನ್ ತಿಂಗಳೊಂದರಲ್ಲಿ 11,800 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಸಂಭವಿಸಿದ ಸಾವುಗಳಿಗೆ ಹೋಲಿಸಿದರೆ ಇದು ಎರಡು ಪಟ್ಟು ಅಧಿಕ. ಸಮಾಧಾನಕರ ವಿಷಯವೆಂದರೆ, ಮೇ ಅಂತ್ಯದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ ಶೇ.4.78ರ ದರದಲ್ಲಿ ಏರಿಕೆಯಾಗುತ್ತಿದ್ದರೆ, ಈಗ ಅದು ಶೇ.3.16ಕ್ಕಿಳಿದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ದಿನವೂ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಇತ್ತೀಚೆಗೆ ದಿಲ್ಲಿ, ತಮಿಳುನಾಡು ಮಾತ್ರವಲ್ಲದೆ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲೂ ಹೆಚ್ಚು ಹೆಚ್ಚು ಮಂದಿಗೆ ಸೋಂಕು ದೃಢಪಡುತ್ತಿರುವುದು ಆತಂಕದ ಸಂಗತಿಯಾಗಿದೆ.
ಒಂದೇ ದಿನ ದೇಶದಲ್ಲಿ 507 ಸಾವು
ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 507 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರವರೆಗೆ ಗರಿಷ್ಠ ಸಂಖ್ಯೆಯ ಸಾವಿನ ಪ್ರಕರಣ ಗಳು ವರದಿಯಾಗಿದ್ದು, 18,653 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸತತ 5ನೇ ದಿನವೂ ದೈನಂದಿನ ಪ್ರಕರಣಗಳ ಸಂಖ್ಯೆ 18 ಸಾವಿರದ ಗಡಿ ದಾಟಿದಂತಾಗಿದೆ. ಈವರೆಗಿನ ಸಾವಿನ ಪ್ರಮಾಣದಲ್ಲಿ ಶೇ.70ರಷ್ಟು ಪ್ರಕರಣಗಳು ಮಹಾರಾಷ್ಟ್ರ, ದಿಲ್ಲಿ ಮತ್ತು ತಮಿಳುನಾಡು ರಾಜ್ಯಗಳಿಗೆ ಸೀಮಿತವಾಗಿವೆ. ಇದೇ ವೇಳೆ, 3.47 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗುವ ಮೂಲಕ, ಗುಣಮುಖ ಪ್ರಮಾಣ ಶೇ.59.43ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.