Advertisement
ಉಗ್ರ ಉಸ್ಮಾನ್ ಕುರಿತ ಅನೇಕ ಮಾಹಿತಿಗಳನ್ನು ಶನಿವಾರ ಪೊಲೀಸರು ಬಹಿರಂಗಪಡಿಸಿದ್ದಾರೆ. ಈತ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಕುಟುಂಬ ಹೊಂದಿದ್ದ ಜಮೀನಿನಲ್ಲೇ ಭಯೋತ್ಪಾದಕ ತರಬೇತಿ ಶಿಬಿರವನ್ನು ಆರಂಭಿಸಿದ್ದ. ಜತೆಗೆ ಲಂಡನ್ ಷೇರು ಮಾರುಕಟ್ಟೆ ಮೇಲಿನ ಬಾಂಬ್ ದಾಳಿಗೆ ಸಂಚು ರೂಪಿಸಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ರನ್ನು ಕೊಲೆ ಮಾಡುವುದೂ ಈತನ ಸಂಚಿನ ಭಾಗವಾಗಿತ್ತು ಮತ್ತು ಮುಂಬಯಿ ದಾಳಿ ಮಾದರಿಯಲ್ಲೇ ಯುಕೆ ಸಂಸತ್ ಮೇಲೆ ದಾಳಿ ನಡೆಸುವ ಕುರಿತೂ ಈತ ಚರ್ಚಿಸಿದ್ದ ಎಂಬ ಸ್ಫೋಟಕ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ.
ಪಾಕ್ ಮೂಲದವನಾದ ಉಸ್ಮಾನ್ ಆರಂಭದಲ್ಲಿ ಅಲ್ ಕಾಯಿದಾ ಸಂಘ ಟನೆಯ ಸದಸ್ಯನಾಗಿದ್ದ. ಅನಂತರದಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಸ್) ಜತೆಗೂ ನಂಟು ಹೊಂದಿದ್ದರ ಬಗ್ಗೆ ಮಾಹಿತಿಯಿದೆ ಎಂದು ಪೊಲೀಸರು ಹೇಳಿದ್ದಾರೆ. ಷೇರುಪೇಟೆ ಸ್ಫೋಟ ಸಂಚು ಪ್ರಕರಣ ಸಂಬಂಧ ಶಿಕ್ಷೆಗೊಳಗಾಗಿದ್ದ ಈತನನ್ನು ಕಳೆದ ಡಿಸೆಂಬರ್‌ನಲ್ಲಿ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅನಂತರವೂ ಆತನ ಚಲನವಲನಗಳ ಮೇಲೆ ಕಣ್ಣಿಡಲಾಗಿತ್ತು.