Advertisement

ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತ್ಯೆ

11:40 AM May 15, 2017 | Karthik A |

ಶ್ರೀನಗರ: ಗಡಿಯೊಳಗೆ ಉಗ್ರರನ್ನು ಬಗ್ಗು ಬಡಿವಲ್ಲಿ ಭದ್ರತಾ ಪಡೆಗಳು ನಿರತವಾಗಿದ್ದರೆ, ಅತ್ತ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್‌ ಅಪ್ರಚೋದಿತ ಶೆಲ್‌ ದಾಳಿ ಮುಂದುವರೆದಿದೆ. ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದಿವೆ. ಇದೇ ವೇಳೆ ರಜೌರಿಯ ನೌಶೇರಾ ವಲಯದಲ್ಲಿ ಪಾಕ್‌ ಶೆಲ್‌ದಾಳಿಯಿಂದ ರಕ್ಷಿಸಲು 1 ಸಾವಿರ ಮಂದಿ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಜನರೇ ಬಂಕರ್‌ ನಿರ್ಮಿಸಿಕೊಳ್ಳುತ್ತಿದ್ದಾರೆ. 

Advertisement

ಖಚಿತ ಮಾಹಿತಿ ಮೇರೆಗೆ ಕುಪ್ವಾರಾದ ಹಂದ್ವಾರಾದ ಭಗತ್ಪುರ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಶುರುಮಾಡಿವೆ. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು, ಪ್ರತಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಾಕ್‌ ದಾಳಿ ಪರಿಣಾಮ ನೌಶೇರಾ ವಲಯದ 51 ಶಾಲೆಗಳನ್ನು ಮುಚ್ಚಲಾಗಿದೆ. ಕಳೆದ ಮೂರು ದಿನಗಳಿಂದ ಇವುಗಳು ತೆರೆದಿಲ್ಲ. ಇನ್ನು ಸ್ಥಳಾಂತರಗೊಂಡ ನಾಗರಿಕರಿಗೆ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದ್ದು 120 ಮಂದಿ ವಿವಿಧ ಇಲಾಖೆಗಳ ರಾಜ್ಯ ಸರಕಾರಿ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ. 

ಹಿಜ್ಬುಲ್‌ ಉಗ್ರನ ಬಂಧನ: ಪ್ರತ್ಯೇಕ ಪ್ರಕರಣವೊಂದರಲ್ಲಿ ಭಾರತ-ನೇಪಾಳ ಗಡಿಗೆ ತಾಗಿಕೊಂಡಂತೆ ಉತ್ತರ ಪ್ರದೇಶದ ಮಹಾರಾಜಗಂಜ್‌ನಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರನನ್ನು ಬಂಧಿಸಲಾಗಿದೆ. ಪಾಕ್‌ ಪಾಸ್‌ಪೋರ್ಟ್‌ ಹೊಂದಿದ್ದ ಆತ ನೆಲಹಾಸು ವರ್ತಕನ ಸೋಗಿನಲ್ಲಿ ಗಡಿ ದಾಟಲು ಯತ್ನಿಸಿದ್ದ. ಈತ  ಭಯೋತ್ಪಾದನೆ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ನಾಸಿರ್‌ ಅಹ್ಮದ್‌ ಅಲಿಯಾಸ್‌ ಸಾದಿಕ್‌ (34) ಎಂಬಾತ ಬಂಧಿತ ಉಗ್ರನಾಗಿದ್ದು, ಈತ ಜಮ್ಮು- ಕಾಶ್ಮೀರದ ಬನಿಹಾಲ್‌ನವನಾಗಿದ್ದಾನೆ. ಹೆಚ್ಚಿನ ತನಿಖೆಗೆ ಆತನನ್ನು ಉತ್ತರಪ್ರದೇಶ ಭಯೋತ್ಪಾದನ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next