ನವದೆಹಲಿ: ದೆಹಲಿಯಲ್ಲಿ ಸೋಮವಾರ ರಾತ್ರಿ ಬಂಧಿಸಲ್ಪಟ್ಟ ಇಬ್ಬರು ಶಂಕಿತ ಜೈಶ್ ಎ ಮೊಹಮ್ಮದ್ ಉಗ್ರರನ್ನು ಪಟಿಯಾಲಾ ಹೌಸ್ ಕೋರ್ಟ್ ಗೆ ಶುಕ್ರವಾರ(ನವೆಂಬರ್ 20, 2020) ಹಾಜರುಪಡಿಸಿದ್ದು, ಇಬ್ಬರನ್ನೂ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಪೊಲೀಸರು ಕೋರ್ಟ್ ಗೆ ನೀಡಿರುವ ಹೇಳಿಕೆ ಪ್ರಕಾರ, ಬಂಧಿತ ಇಬ್ಬರು ಶಂಕಿತ ಲಷ್ಕರ್ ಉಗ್ರರ ಫೋನ್ ನಲ್ಲಿರುವ ಮಾಹಿತಿಯ ವಿಶ್ಲೇಷಣೆ ನಡೆಸಿದಾಗ, ಮೂರನೇ ಉಗ್ರ ಕೂಡಾ ದೆಹಲಿಯಲ್ಲಿದ್ದು, ಆತನ ಪತ್ತೆಗೆ ಜಾಲಹೆಣೆಯಲಾಗಿದೆ. ಕೋರ್ಟ್ ಇಬ್ಬರು ಶಂಕಿತ ಉಗ್ರರ ಮುಂದಿನ ವಿಚಾರಣೆ ನಡೆಸಲು ಐದು ದಿನಗಳ ಕಾಲ ಪೊಲೀಸರ ವಶಕ್ಕೊಪ್ಪಿಸಿದೆ.
ದೆಹಲಿಯ ಮಿಲೇನಿಯಂ ಪಾರ್ಕ್ ಸಮೀಪದ ಸರಾಯ್ ಕಾಲೆ ಖಾನ್ ಪ್ರದೇಶದಲ್ಲಿ ನವೆಂಬರ್ 16ರಂದು ಲತೀಫ್ ಮತ್ತು ಅಶ್ರಫ್ ನನ್ನು ಬಂಧಿಸಲಾಗಿತ್ತು. ಇಬ್ಬರು ಶಂಕಿತ ಜೈಶ್ ಉಗ್ರರು ದೆಹಲಿಯಲ್ಲಿ ದಾಳಿ ನಡೆಸಿ, ಪಾಕಿಸ್ತಾನಕ್ಕೆ ಪರಾರಿಯಾಗಲು ಸಂಚು ರೂಪಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸೋನಿಯಾ ಗಾಂಧಿ ದೆಹಲಿ ತೊರೆಯಬೇಕು, ಚೆನ್ನೈನಲ್ಲಿ ಕೆಲಕಾಲ ವಾಸ? ವೈದ್ಯರ ಸಲಹೆ
ಅಬ್ದುಲ್ ಲತೀಫ್ ಮೀರ್(22ವರ್ಷ) ಬಾರಾಮುಲ್ಲಾ ಜಿಲ್ಲೆಯ ಡೋರು ಗ್ರಾಮದ ನಿವಾಸಿ. ಮೊಹಮ್ಮದ್ ಅಶ್ರಫ್ ಖಾಟಾನಾ(20ವರ್ಷ) ಕುಪ್ವಾರಾ ಜಿಲ್ಲೆಯ ಹಾತ್ ಮುಲ್ಲಾ ಗ್ರಾಮದ ನಿವಾಸಿ ಎಂದು ವರದಿ ವಿವರಿಸಿದೆ.