Advertisement

ಬೆಂಗಳೂರಿನಲ್ಲಿ ಬೇಹುಗಾರಿಗೆ ಜಾಲ ಪತ್ತೆಗೆ ಮುನ್ನುಡಿ ಬರೆಯಿತು ಆ ಒಂದು ಕರೆ!

11:29 AM Jun 11, 2021 | Team Udayavani |

ಬೆಂಗಳೂರು/ ನವದೆಹಲಿ: ಪೂರ್ವ ಭಾರತದಲ್ಲಿನ ಸೇನಾ ಘಟಕವೊಂದಕ್ಕೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಿಂದ ಬಂದ ಒಂದು ಕರೆಯೇ ಬೆಂಗಳೂರಿನಲ್ಲಿ ಅಕ್ರಮ ಟೆಲಿಫೋನ್‌ ಎಕ್ಸ್‌ ಚೇಂಜ್‌ ಜಾಲದ ಪತ್ತೆಗೆ ಮುನ್ನುಡಿ ಬರೆಯಿತು!

Advertisement

ಈ ಕರೆಯನ್ನು ಛೇದಿಸಿದ ಸೇನೆಯ ಸದರ್ನ್ಕ ಮಾಂಡ್‌ನ‌ ಸೇನಾ ಗುಪ್ತಚರ ಘಟಕವು ಇಡೀ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ದೇಶದ ಇತರೆ ಭಾಗಗಳಲ್ಲೂ ಇಂತಹ ವ್ಯವಸ್ಥೆಗಳು ಕಾರ್ಯಾಚರಿಸುತ್ತಿವೆಯೇ ಎಂಬ ಪ್ರಶ್ನೆಗಳೂ ಮೂಡಿದ್ದು ಆ ಕುರಿತು ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಸೇನಾ ಘಟಕಕ್ಕೆ ಕರೆ ಮಾಡಿದ್ದ ಪಾಕಿಸ್ತಾನದ ಗುಪ್ತಚರ, ತನ್ನನ್ನು ತಾನು ಸೇನೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದು, ಸೇನೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಗಳನ್ನು ಕೇಳಲಾರಂಭಿಸಿದ್ದ. ಕೇವಲ ಈ ಘಟಕಕ್ಕೆ ಮಾತ್ರವಲ್ಲದೇ, ಸೇನೆಯ ಮೂವ್‌ ಮೆಂಟ್‌ ಕಂಟ್ರೋಲ್‌ ಆಫೀಸ್‌(ಎಂಸಿಒ) ಮತ್ತು ಪ್ರಿನ್ಸಿಪಾಲ್‌ ಕಂಪ್ಟ್ರೋಲರ್‌ ಆಫ್ ಡಿಫೆನ್ಸ್‌ ಅಕೌಂಟ್‌ (ಪಿಸಿಡಿಎ)ಗೂ ಇಂತಹುದೇ ಕರೆಗಳು ಬಂದಿದ್ದವು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಪೊಲೀಸರನ್ನು ಕೊಂದು ಪಂಜಾಬ್ ನಿಂದ ಪರಾರಿಯಾಗಿದ್ದ ಇಬ್ಬರು ಸ್ಮಗ್ಲರ್ ಗಳು ಗುಂಡೇಟಿಗೆ ಬಲಿ

ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಥೆಗಳು ಈ ರೀತಿಯ ಅಕ್ರಮ ಟೆಲಿ ಫೋನ್‌ ಎಕ್ಸ್‌ ಚೇಂಜ್‌ಗಳನ್ನು ಬಳಸಿಕೊಂಡು ಭಾರತೀಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಿ, ಸೇನೆಗೆ ಸಂಬಂಧಿಸಿದ ಮಾಹಿತಿ, ವಿವರಗಳನ್ನು ಪಡೆಯುತ್ತಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಕರೆಗಳನ್ನು ದೇಶೀಯ ಕರೆಯಾಗಿ ಮಾರ್ಪಾಟು ಮಾಡುವ ಇಂಥ ಅಕ್ರಮ ಟೆಲಿಫೋನ್‌ ಎಕ್ಸ್‌ ಚೇಂಜ್‌ ಗಳಲ್ಲಿ ಹೂಡಿಕೆ ಮಾಡುವುದು ಕೂಡ ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳ ತಂತ್ರದ ಭಾಗವಾಗಿದೆ ಎಂದೂ ಹೇಳಲಾಗಿದೆ.

Advertisement

ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಸಿಸಿಬಿ ಮಾತ್ರವಲ್ಲದೆ, ಕೇಂದ್ರ ತನಿಖಾ ಸಂಸ್ಥೆಗಳಾದ ರಾ, ಸಿಬಿಐ, ಕೇಂದ್ರ ಗುಪ್ತಚರ ಇಲಾಖೆ, ಸೇನೆಯ ಗುಪ್ತಚರ ವಿಭಾಗ ಕೂಡ ತನಿಖೆ ಕೈಗೊಂಡಿದೆ. ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಪ್ರಕರಣದ ಬಂಧಿತ ಆರೋಪಿಗಳಿಗೆ ದುಬೈ ಮಾತ್ರವಲ್ಲದೆ, ಪಾಕಿಸ್ತಾನ ಜತೆ ಸಂಪರ್ಕ ಇರುವ ಬಗ್ಗೆ ಸಿಸಿಬಿಯ ಭಯೋತ್ಪಾದನಾ ನಿಗ್ರಹ ಪಡೆ(ಎಟಿಸಿ) ಮಾಹಿತಿ ಸಂಗ್ರಹಿಸಿದೆ.

ಪಾಕ್‌ನಿಂದ ಬಂದವರೊಂದಿಗೆ ಸಂಪರ್ಕ: ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಬಂಧಕ್ಕೊಳಗಾಗಿರುವ ಕೇರಳದ ಇಬ್ರಾಹಿಂ ಪುಲ್ಲಟ್ಟಿ, ಪಾಕಿಸ್ತಾನದ ಕೆಲ ಗುಪ್ತಚರರ ಜತೆ ಸೇರಿಕೊಂಡು ಭಾರತದ ಕೆಲ ನಾಗರಿಕರನ್ನು ಸಂಪರ್ಕಿಸಿ ಸೇನೆಗೆ ಸಂಬಂಧಿಸಿದ ವಿಚಾರಗಳನ್ನು ಪಡೆಯಲು ಸಹಾಯ  ಮಾಡುತ್ತಿದ್ದ. ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಕೆಲವು ಸಂಘಟನೆಗಳ ಕಾರ್ಯಕರ್ತರನ್ನು ಈ ಮೂಲಕ ಸಂಪರ್ಕಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಕರೆಗಳ ಪರಿವರ್ತನೆ ಬಗ್ಗೆ ದುಬೈನಲ್ಲಿ ತರಬೇತಿ ಪಡೆದುಕೊಂಡಿದ್ದ ಇಬ್ರಾಹಿಂಗೆ ಪಾಕಿಸ್ತಾನ ಮೂಲದ ಗುಪ್ತಚರರೇ ತರಬೇತಿ ನೀಡಿದ್ದಾರೆ. ಅಲ್ಲದೆ, ಈತ ಬಳಸುತ್ತಿದ್ದ ಪರಿವರ್ತನೆಯ ಎಲೆಕ್ಟ್ರಾನಿಕ್‌ ಸಾಧನಗಳು ಪಾಕಿಸ್ತಾನ ಮತ್ತು ಅರಬ್‌ ರಾಷ್ಟ್ರಗಳಿಂದಲೇ ತರಿಸಲಾಗಿದೆ ಎಂದು ಹೇಳಲಾಗಿದೆ.

ಸ್ಲೀಪರ್‌ ಸೆಲ್‌ಗ‌ಳ ಜತೆ ಸಂಪರ್ಕ: ಆರೋಪಿಗಳ ಪೈಕಿ ಕೇರಳದ ಇಬ್ರಾಹಿಂ ಪುಲ್ಲಟ್ಟಿ, ದುಬೈ ಮಾತ್ರವಲ್ಲದೆ ನೆರೆ ಪಾಕಿಸ್ತಾನದ ಕೆಲವರ ಜತೆ ಸಂಪರ್ಕದಲ್ಲಿದ್ದಾನೆ. ತನ್ನ ಅಕ್ರಮ ಚಟುವಟಿಕೆಯಲ್ಲಿ ಬಂದ ಹಣದಲ್ಲಿ ದುಬೈ ಮತ್ತು ಪಾಕ್‌ನಲ್ಲಿರುವ ಕೆಲವರಿಗೆ ಪಾಲು ನೀಡುತ್ತಿದ್ದ ಎಂಬುದು ಗೊತ್ತಾಗಿದೆ. ಆರೋಪಿಗಳ ಕೃತ್ಯದಿಂದ ಭಾರತೀಯ ದೂರಸಂಪರ್ಕ ಇಲಾಖೆಗೆ ನಷ್ಟ ಉಂಟಾಗಿದ್ದು ಮಾತ್ರವಲ್ಲದೇ, ದೇಶದ ಆಂತರಿಕಾ ಭದ್ರತೆಗೆ ಧಕ್ಕೆಯಾಗಿದೆ. ಕೆಲವೊಂದು ಉಗ್ರ ಸಂಘಟನೆಗಳ ಸದಸ್ಯರು ವಿದೇಶದಲ್ಲಿ ಕುಳಿತು ಬೆಂಗಳೂರಿನಲ್ಲಿರುವ ಸ್ಲೀಪರ್‌ ಸೆಲ್‌ಗ‌ಳ ಜತೆ ಮಾತನಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಆರೋಪಿಗಳನ್ನು ತೀವ್ರ ವಿಚಾರಣೆ ಗೊಳಪಡಿಸಿದ್ದು, ತಲೆ ಮರೆಸಿ ಕೊಂಡಿರುವ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next