ಕನಸು ಕಂಗಳೊಂದಿಗೆ ಮಾಡಿದ ಸಿನಿಮಾ ಗೆಲುವಿನ ಅಂಚಿಗೆ ಹೋಗಿ ಸೋತಾಗ ಆಗುವ ನೋವು ಇದೆಯಲ್ಲಾ, ಅದನ್ನು ಪದಗಳಲ್ಲಿ ಹೇಳುವುದು ಕಷ್ಟ. ಈ ಬಾರಿ ಅಂತಹ ನೋವು ಅನೇಕ ತಂಡಗಳಿಗೆ ಆಗಿದೆ. ಅದರಲ್ಲೂ ಮುಖ್ಯವಾಗಿ ಎರಡು ತಂಡಗಳು ಇನ್ನೇನು ಗೆದ್ದೇಬಿಡು¤ ಎನ್ನುವಂತೆ ಮೇಲ್ನೋಟಕ್ಕೆ ಕಂಡರೂ ನಿರ್ಮಾಪಕ ಮಾತ್ರ ಸೇಫ್ ಆಗಿಲ್ಲ. ಆ ಎರಡು ಸಿನಿಮಾಗಳ ಕುರಿತು ಇಲ್ಲಿ ಹೇಳಲಾಗಿದೆ. ಹಾಗಂತ ಇದು ಆ ತರಹ ನೋವು ಅನುಭವಿಸಿದ ಅನೇಕ ಸಿನಿಮಾಗಳ ಧ್ವನಿ ಎಂದರೂ ತಪ್ಪಾಗಲ್ಲ…
ಘಟನೆ -1
ಹೊಸಬರೇ ಸೇರಿ ಮಾಡಿರುವ “ಬ್ಲಿಂಕ್’ ಎಂಬ ಚಿತ್ರ ತೆರೆಕಂಡಾಗ ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದಿತ್ತು. ಆದರೆ, ಸಿನಿಮಾ ಬಿಡುಗಡೆಯಾಗಿ ಕೆಲವು ದಿನಗಳ ನಂತರ ಸಿನಿಮಾದಲ್ಲಿ ಏನೋ ಹೊಸತನವಿದೆಯಂತೆ, ಹೊಸಬರ ತಂಡ ಹೊಸ ಪ್ರಯತ್ನ ಮಾಡಿದೆಯಂತೆ ಎಂಬ ಮಾತು ಕೇಳಿಬರತೊಡಗಿತು. ಅದಕ್ಕೆ ಪೂರಕವಾಗಿ ನಟ ಶಿವರಾಜ್‌ಕುಮಾರ್ ಕೂಡಾ ಚಿತ್ರತಂಡಕ್ಕೆ ಬೆಂಬಲವಾಗಿ ಟ್ವೀಟ್ ಕೂಡಾ ಮಾಡಿದರು. ಇನ್ನೇನು ಚಿತ್ರಮಂದಿರ ಗಳಿಂದ ಚಿತ್ರಮಂದಿರವನ್ನು ತೆಗೆದೇ ಬಿಡುತ್ತಾರೆ ಎಂಬಂತಿದ್ದ ಪರಿಸ್ಥಿತಿ ಬದಲಾಯಿತು. ಎಂಟು ಶೋನಿಂದ 82 ಶೋವರೆಗೆ ಏರಿಕೆಯಾಯಿತು. ಇಡೀ ಚಿತ್ರತಂಡ ಕೂಡಾ ಹುಮ್ಮಸ್ಸಿನಿಂದ ಓಡಾಡಿ, ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾದ ಪ್ರದರ್ಶನ ಉತ್ತಮಗೊಳಿಸಲು ಏನು ಬೇಕೋ ಎಲ್ಲವನ್ನು ಮಾಡಿತು. 25ದಿನದ ಸಂಭ್ರಮ, 50 ದಿನ ಸಂಭ್ರಮವನ್ನೂ ಮಾಡಿತು.
ಇಷ್ಟೆಲ್ಲಾ ಕಷ್ಟಪಟ್ಟು 50 ದಿನ ನಿಲ್ಲಿಸಿದ ಈ ಸಿನಿಮಾ ಚಿತ್ರಮಂದಿರದಿಂದ ದುಡಿದಿದ್ದು ಎಷ್ಟೆಂದು ಕೇಳಿದರೆ ಖಂಡಿತಾ ನಿಮಗೆ ಬೇಸರವಾಗುತ್ತದೆ. ಏಕೆಂದರೆ ಒಬ್ಬ ನಿರ್ಮಾಪಕ ಹಾಗೂ ತಂಡ ಇಷ್ಟೆಲ್ಲಾ ಕಷ್ಟಪಟ್ಟರೂ ಬಂದಿದ್ದು ಇಷ್ಟೇನಾ ಎಂದು ಕೇಳ ಬಹುದು. ಹೌದು, “ಬ್ಲಿಂಕ್’ ಚಿತ್ರದ 50 ದಿನದ ಪ್ರದರ್ಶನದಲ್ಲಿ ಚಿತ್ರಮಂದಿರದಿಂದ ಬಂದಿದ್ದು ಕೇವಲ 88 ಲಕ್ಷ ರೂಪಾಯಿ. ಇದು ಒಟ್ಟು ಕಲೆಕ್ಷನ್. ಇದರಲ್ಲಿ ಚಿತ್ರಮಂದಿರಗಳ ಬಾಡಿಗೆ ಹಾಗೂ ಇತರ ಖರ್ಚುಗಳನ್ನು ಕಳೆದರೆ ನಿರ್ಮಾಪಕರ ಕೈಗೆ ಸೇರುವುದು ಕೇವಲ 38ರಿಂದ 40 ಲಕ್ಷ ರೂಪಾಯಿ. ಒಂದೊಳ್ಳೆಯ ಸಿನಿಮಾ ಮಾಡಿಯೂ ನಿರ್ಮಾಪಕ ಸೇಫ್ ಆಗಲು ಸಾಧ್ಯವಾಗಲೇ ಇಲ್ಲ. ಇಂತಹ ಸಂದರ್ಭದಲ್ಲಿ ಯಾರನ್ನು ದೂರಬೇಕು, ಪ್ರೇಕ್ಷಕರನ್ನೋ ಅಥವಾ ಹಣೆಬರಹವನ್ನೋ…
ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ನಮಗಿದೆ. ಇಡೀ ತಂಡ ಬೆಂಬಲ ಕೊಟ್ಟರೂ ನನಗೆ ಸೇಫ್ ಆಗಲು ಆಗಲಿಲ್ಲ. ಇಲ್ಲಿ ಬಿಝಿನೆಸ್ ಆಗಲ್ಲ ಎಂದು ಹೇಳುವಂತಿಲ್ಲ. ಆದರೆ, ಕಾಯಬೇಕು ಮತ್ತು ತಾಳ್ಮೆಬೇಕು. ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾವೊಂದರ ಬಗ್ಗೆ ಒಳ್ಳೆಯ ಮಾತು ಕೇಳಿಬರುತ್ತಿದ್ದಂತೆ ಇಡೀ ಚಿತ್ರರಂಗ ಒಟ್ಟಾಗಿ ಆ ಸಿನಿಮಾವನ್ನು ಎತ್ತಿ ಹಿಡಿಯುತ್ತದೆ. ನಾನ್ಯಾಕೆ ಹೋಗಬೇಕು, ಲಾಭವಾದರೆ ಅವನಿಗಲ್ಲ ಎಂಬ ಮನಸ್ಥಿತಿ ಅಲ್ಲಿ ಇಲ್ಲ. ನಮ್ಮಲ್ಲೂ ಇಂತಹ ಮನಸ್ಥಿತಿ ಬರಬೇಕು. ಸ್ಟಾರ್‌ಗಳು ಬಂದು ಹೊಸಬರ ಸಿನಿಮಾವನ್ನು ಬೆಂಬಲಿಸಿದಾಗ ಅದು ನಮ್ಮಂತಹವರಿಗೆ ಆನೆಬಲ ಸಿಕ್ಕಂತೆ. ನಮಗೆ ಮುಂಚೂಣಿ ನಟರಲ್ಲಿ ಶಿವಣ್ಣ ಬೆಂಬಲಿಸಿದರು. ಇಂತಹ ಬೆಂಬಲ ಬೇರೆ ನಟರಿಂದಲೂ ಸಿಕ್ಕಿದ್ದರೆ ಸಿನಿಮಾದ ರೀಚ್ ಹೆಚ್ಚುತ್ತಿತ್ತು. ನಾವು ಯಾರನ್ನೂ ಶಪಿಸುವಂತಿಲ್ಲ. ಸಿನಿಮಾದ ಡಬ್ಬಿಂಗ್ ಸೇರಿದಂತೆ ಇತರ ಬಿಝಿನೆಸ್ ಮಾತುಕತೆ ನಡೆಯುತ್ತಿದೆ.
-ರವಿಚಂದ್ರ, “ಬ್ಲಿಂಕ್’ ನಿರ್ಮಾಪಕ
ಘಟನೆ -2
ಪಕ್ಕಾ ಮಲೆನಾಡಿನ ಸಂಸ್ಕೃತಿಯನ್ನಿಟ್ಟು ಕೊಂಡು ತೆರೆಕಂಡಿರುವ “ಕೆರೆಬೇಟೆ’ ಚಿತ್ರಕ್ಕೆ ಪ್ರೀಮಿಯರ್ ಶೋನಿಂದಲೇ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೆ ಪೂರಕವಾಗಿ ಈ ಚಿತ್ರಕ್ಕೆ ಚಿತ್ರರಂಗದ ಅನೇಕರು ಬೆಂಬಲ ಸೂಚಿಸಿದರು. ವಿಶೇಷ ಪ್ರದರ್ಶನದಲ್ಲೂ ಭಾಗಿಯಾಗಿ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ನಾಯಕ ನಟ ಗೌರಿಶಂಕರ್ ಅಂತೂ ಶತಾಯಗತಾಯ ಈ ಬಾರಿ ಗೆಲ್ಲಲೇಬೇಕೆಂದು ಈ ಸಿನಿಮಾದ ಹಿಂದೆ ಓಡಾಡಿದ ರೀತಿ ನಿಜಕ್ಕೂ ಶ್ಲಾಘನೀಯ. ಸಿನಿಮಾದ ಸಣ್ಣ ಸಣ್ಣ ಅಪ್‌ಡೇಟ್ ಗಳನ್ನು ಮಾಧ್ಯಮಕ್ಕೆ ಮುಟ್ಟಿಸಿ, ಅದರ ಬೆಂಬಲ ಕೋರುತ್ತಾ ಬಂದ ನಾಯಕ ಗೌರಿ ಶಂಕರ್ ಈಗ ನೋವಿನ ಮಾತನಾಡಿದ್ದಾರೆ.
“ಒಂದು ಒಳ್ಳೆ ಚಿತ್ರ ಅಂತ ಅನ್ನಿಸಿಕೊಂಡು ಸೋತು ಹೋದಾಗ ಆಗ ನೋವು ಹೇಳಕ್ಕಾಗಲ್ಲ ಪದಗಳಲ್ಲಿ…’ ಎಂದಿದ್ದಾರೆ ಗೌರಿಶಂಕರ್. ಇನ್ನೇನು ಗೆಲುವಿನ ಅಂಚಿಗೆ ಹೋದ ಚಿತ್ರವೊಂದು ಸೋತಾಗ ಆಗುವ ನೋವು ಹೇಳತೀರದು. ಇಲ್ಲೂ ಅಷ್ಟೇ ಶಪಿಸುವುದು ಯಾರನ್ನು…
ಒಳ್ಳೇ ಚಿತ್ರ ಮಾಡುವಂತ ಎಲ್ಲಾ ಪ್ರಯತ್ನವನ್ನು ಮಾಡಿದ್ವಿ, ನೀವು ಕೂಡ ನೋಡಿ ಮೆಚ್ಚಿದ್ರಿ ಹಾಗೂ ಸಹಕರಿಸಿದ್ರಿ, ಆದರೂ ಕೂಡ ಆ ಚಿತ್ರಕ್ಕೆ ಬೇಕಾದಂತ ಗೆಲುವು ಸಿಗಲಿಲ್ಲ. ಈಗಲೂ ಕೂಡ ಹೊರಗಡೆ ಸಾಮಾನ್ಯ ಜನ ಕೆರೆಬೇಟೆ ಚಿತ್ರ ದೊಡ್ಡ ಗೆಲುವಾಗಿದೆ ಅಂತಾನೆ ಅಂದುಕೊಂಡಿದ್ದಾರೆ. ಒಂದು ಒಳ್ಳೆ ಚಿತ್ರ ಅಂತ ಅನ್ನಿಸಿಕೊಂಡು ಸೋತು ಹೋದಾಗ ಆಗ ನೋವು ಹೇಳಕ್ಕಾಗಲ್ಲ ಪದಗಳಲ್ಲಿ. ಸುಮಾರಷ್ಟು ಭವಿಷ್ಯದ ಕನಸು ಗಳನ್ನು ಇಟ್ಟುಕೊಂಡು ನಿರ್ಮಾಣ ಮಾಡಿದ ಚಿತ್ರ ಕೆರೆಬೇಟೆ, ಇವತ್ತು ಸೋತ ನಂತರ ಒಬ್ಬ ನಿರ್ಮಾಪಕ ಭಿಕ್ಷುಕರಿಗಿಂತಲೂ ಕಡೆ ಆಗ್ತಾನೆ, ಯಾವುದೇ ರೈಟರ್ಸ್ ಹತ್ತಿರ ಹೋದ್ರು ಬೇಡ್ಬೇಕು. ಮತ್ತೆ ನಮ್ಮ ಬದುಕನ್ನ ನಾವು ಸೊನ್ನೆಯಿಂದ ಅಲ್ಲ, ಮೈನಸ್‌ನಿಂದ ಸ್ಟಾರ್ಟ್ ಮಾಡುವಂತಹ ಪರಿಸ್ಥಿತಿ. ಈ ಹಿಂದೆ ನಾನು ಅಭಿನಯಿಸಿ ನಿರ್ಮಾಣ ಮಾಡಿದಂತಹ ರಾಜ ಹಂಸ ಚಿತ್ರಕ್ಕೂ ಇದೇ ರೀತಿಯ ಸೋಲು. ನಾನು ಕೋಟಿ ಇಟ್ಕೊಂಡು ಸಿನಿಮಾ ಮಾಡುವಂತ ಬ್ಯಾಕ್ ಗ್ರೌಂಡ್ ಇರೋನಲ್ಲ, ಎಷ್ಟೇ ಕಷ್ಟ ಆದ್ರೂ ಒಂದು ಚಿತ್ರಕ್ಕೆ ಏನು ಬೇಕು ಅದೆಲ್ಲವನ್ನು ಶಕ್ತಿ ಮೀರಿ ಪ್ರಯತ್ನಿಸಿ ಮಾಡುವಂತ ಕನಸಿರುವವನು ಅಷ್ಟೇ. ಇವೆಲ್ಲವನ್ನು ಮೀರಿ ದುಃಖದ ಸಂಗತಿ ಅಂದರೆ, ನಮ್ಮ ಚಿತ್ರರಂಗ ಕೂಡ ಒಳ್ಳೆಯ ಪ್ರಯತ್ನಕ್ಕೆ ,ಒಳ್ಳೆಯ ಅಭಿನಯಕ್ಕೆ, ಒಳ್ಳೆಯ ಕಥೆಗಾರರಿಗೆ, ಒಳ್ಳೆಯ ನಿರ್ದೇಶಕರಿಗೆ, ಯಾವುದೇ ರೀತಿಯ ಅವಕಾಶಗಳನ್ನು ಗೆಲುವಿಲ್ಲದೇ ಕೊಡುವುದಿಲ್ಲ. ನನಗೆ ಮತ್ತೆ ನಾನೇ ನಿರ್ಮಾಣ ಮಾಡಿ ಸಿನಿಮಾ ಮಾಡುವಂತ ಶಕ್ತಿ ಸದ್ಯಕ್ಕಿಲ್ಲ.
– ಗೌರಿ ಶಂಕರ್, “ಕೆರೆಬೇಟೆ’ ನಾಯಕ
100 ಸಿನಿಮಾ, 250 ಕೋಟಿ ಬಂಡವಾಳ: ವಾಪಸ್ ಎಷ್ಟೆಂದು ಕೇಳಬೇಡಿ…
ಕನ್ನಡ ಚಿತ್ರರಂಗ ಮೇ 17ಕ್ಕೆ ಈ ವರ್ಷದ ಸೆಂಚುರಿ ಪೂರೈಸಿದೆ. ನೂರು ಸಿನಿಮಾಗಳು ತೆರೆಕಂಡಿವೆ. ಈ ನೂರು ಸಿನಿಮಾಗಳ ಒಟ್ಟು ಬಂಡವಾಳವನ್ನು ಲೆಕ್ಕ ಹಾಕಿದರೆ 250 ಕೋಟಿ ರೂಪಾಯಿ ದಾಟುತ್ತದೆ. ಒಂದು ಕೋಟಿ ರೂಪಾಯಿ ಬಜೆಟ್‌ನ ಸಿನಿಮಾದಿಂದ ಹಿಡಿದು 15 ಕೋಟಿ ರೂಪಾಯಿ ಬಜೆಟ್‌ವರೆಗಿನ ಚಿತ್ರಗಳು ನಾಲ್ಕೂವರೆ ತಿಂಗಳಲ್ಲಿ ತೆರೆಕಂಡಿದೆ. ಇವೆಲ್ಲವನ್ನು ಲೆಕ್ಕ ಹಾಕಿ ನೋಡಿದಾಗ ಕನ್ನಡಚಿತ್ರರಂಗದ ಮೇಲೆ ಕಳೆದ ನಾಲ್ಕೂವರೆ ತಿಂಗಳಲ್ಲಿ 250 ಕೋಟಿ ರೂಪಾಯಿ ಬಂಡವಾಳ ಹೂಡಿದಂತಾಗುತ್ತದೆ. ಕೆಲವು ಸಿನಿಮಾಗಳು ಓಟಿಟಿ, ಸ್ಯಾಟ್‌ಲೈಟ್‌ನಲ್ಲಿ ಬಿಝಿನೆಸ್ ಮಾಡಿಕೊಂಡಿದ್ದು ಬಿಟ್ಟರೆ ಚಿತ್ರಮಂದಿರದಿಂದ ಬಂದ ಕಲೆಕ್ಷನ್ ಅಷ್ಟಕ್ಕಷ್ಟೇ.
ಓಟಿಟಿಯಲ್ಲಿ ಇದೆ ಎಂಬ ಖುಷಿಯಷ್ಟೇ…
ಸದ್ಯ ಕನ್ನಡದ ಅನೇಕ ಸಿನಿಮಾಗಳು ಓಟಿಟಿ ವೇದಿಕೆಯಲ್ಲಿವೆ. ಹಾಗಂತ ಈ ಸಿನಿಮಾಗಳನ್ನು ಓಟಿಟಿ ಒಂದು ದೊಡ್ಡ ಮೊತ್ತ ನೀಡಿ ಖರೀದಿಸಿಲ್ಲ. ಬದಲಾಗಿ ಪೇ ಪರ್ ವೀವ್ ಎಂಬ ಕೆಟಗರಿನಡಿ ಪಡೆದಕೊಂಡಿರುತ್ತದೆ. ಇಲ್ಲಿ ನಿಮ್ಮ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ 60 ದಿನದೊಳಗೆ ಓಟಿಟಿಗೆ ನೀಡಿದರೆ ಒಂದು ಗಂಟೆ ಸ್ಟ್ರೀಮಿಂಗ್‌ಗೆ ನಿಮಗೆ 4 ರೂಪಾಯಿ ನೀಡುತ್ತದೆ. ಈ ರೀತಿ “ಗಂಟೆ’ ಲೆಕ್ಕಾಚಾರದಿಂದ ನಿರ್ಮಾಪಕರಿಗೇನು ದೊಡ್ಡ ಲಾಭವಿಲ್ಲ.
ರವಿಪ್ರಕಾಶ್ ರೈ