Advertisement

ಗುಜರಿ ಬಸ್‌ ವಿಲೇವಾರಿಗೆ 2 ಡಂಪಿಂಗ್‌ ಯಾರ್ಡ್‌

04:15 PM Oct 28, 2017 | Team Udayavani |

ಬೆಂಗಳೂರು: ಗುಜರಿ ಬಸ್ಸುಗಳ ವಿಲೇವಾರಿಯೇ ಬಿಎಂಟಿಸಿಗೆ ತಲೆನೋವಾಗಿ ಪರಿಣಮಿಸಿದ್ದು, ಜಾಗ ಆಕ್ರಮಿಸಿಕೊಳ್ಳುತ್ತಿರುವ ಈ ಬಸ್‌ಗಳ ಸ್ಥಳಾಂತರಕ್ಕೆ ನಗರದಲ್ಲಿ ಎರಡು ಡಂಪಿಂಗ್‌ ಯಾರ್ಡ್‌ ತೆರೆಯಲು ನಿಗಮ ನಿರ್ಧರಿಸಿದೆ.

Advertisement

ಒಂಬತ್ತು ಲಕ್ಷ ಕಿ.ಮೀ. ಪೂರೈಸಿರುವ ಸುಮಾರು 800ಕ್ಕೂ ಅಧಿಕ ಬಸ್‌ಗಳಿವೆ. ವರ್ಷಾಂತ್ಯಕ್ಕೆ ಇವುಗಳ ಸಂಖ್ಯೆ 1,300 ಆಗಲಿದೆ. ಗುಜರಿ ಪಟ್ಟಿಗೆ ಸೇರಿರುವ ಈ ಬಸ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಆದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ನೋಟು ಅಮಾನ್ಯದಿಂದಾಗಿ ನಿಗದಿಪಡಿಸಿದ ಕನಿಷ್ಠ ದರದಲ್ಲಿ ಖರೀದಿಸಲು ಕೂಡ ಯಾರೂ ಮುಂದೆಬರುತ್ತಿಲ್ಲ.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಗುಜರಿ ಸೇರಿರುವ ಈ ಬಸ್‌ಗಳನ್ನು ಡಂಪಿಂಗ್‌ ಯಾರ್ಡ್‌ಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸರ್ಕಾರಿ ಜಾಗ ಗುರುತಿಸಲು ಸೂಚಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಜರಿ ಬಸ್‌ಗಳ ಖರೀದಿಗೆ ಈ ಮೊದಲು ಶೇ.5ರಷ್ಟು ಜಿಎಸ್‌ಟಿ ಇತ್ತು. ಈಗ ಇದರ ಪ್ರಮಾಣ ಶೇ.28ಕ್ಕೆ ಏರಿಕೆಯಾಗಿದೆ. ಈ ಮೊದಲು ಗುಜರಿಗೆ ಸೇರಿರುವ ಒಂದು ಬಸ್‌ಗೆ ಕನಿಷ್ಠ 2ರಿಂದ 3 ಲಕ್ಷ ರೂ. ಬರುತ್ತಿತ್ತು. ಆದರೆ, ಈಗ ಒಂದು ಲಕ್ಷ ಬರುವುದೂ ಅನುಮಾನವಾಗಿದೆ. ಅಂದರೆ ತಲಾ ಬಸ್‌ಗೆ ಒಂದು ಲಕ್ಷ ಇಳಿಕೆಯಾದರೂ, ಸಾವಿರ ಬಸ್‌ಗಳಿಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಈ ಬಸ್‌ಗಳ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟಿಕೆಟ್‌ ಚೆಕಿಂಗ್‌; ವೀಡಿಯೊ ರೆಕಾರ್ಡಿಂಗ್‌
ಟಿಕೆಟ್‌ ತಪಾಸಣಾಧಿಕಾರಿ ಮತ್ತು ನಿರ್ವಾಹಕರ ನಡುವಿನ ಸಂಘರ್ಷ ತಪ್ಪಿಸಲು ತಪಾಸಣಾಧಿಕಾರಿಗೆ ಇನ್ನುಮುಂದೆ ವೀಡಿಯೊ ರೆಕಾರ್ಡಿಂಗ್‌ ಕ್ಯಾಮೆರಾ ಒದಗಿಸುವುದಾಗಿ ಇದೇ ವೇಳೆ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಾಹಿತಿ ನೀಡಿದರು.

Advertisement

“ಟಿಕೆಟ್‌ರಹಿತ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರ ತಪಾಸಣೆ ವೇಳೆ ಪದೇ ಪದೆ ಆ ಬಸ್‌ ನಿರ್ವಾಹಕ ಮತ್ತು ತಪಾಸಣಾಧಿಕಾರಿ ನಡುವೆ ಸಂಘರ್ಷ ನಡೆಯುತ್ತದೆ. ಇದನ್ನು ತಪ್ಪಿಸಲು ವೀಡಿಯೊ ಕ್ಯಾಮೆರಾ ನೀಡಲಾಗುತ್ತದೆ. ಜತೆಗೆ ಬಸ್‌ಗಳಲ್ಲೂ ಸಿಸಿಟಿವಿ ಇರುತ್ತದೆ. ಇವೆರಡರಲ್ಲಿನ ವೀಡಿಯೊ ತುಣುಕುಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,’ ಎಂದು ಹೇಳಿದರು.

400 ಬಸ್‌ ಸೇರ್ಪಡೆ: ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಬಸ್‌ಗಳ ಬಗ್ಗೆ ಕೇಳಿದಾಗ, ತಿಂಗಳಾಂತ್ಯದಲ್ಲಿ 400 ಬಸ್‌ಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಈಗಾಗಲೇ ಇರುವ ಬಸ್‌ಗಳ ಸಮರ್ಪಕ ನಿರ್ವಹಣೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಎಲೆಕ್ಟ್ರಿಕ್‌ ಬಸ್‌ ಖರೀದಿಗೂ ಚರ್ಚೆ ನಡೆದಿದೆ. ಬಸ್‌ ಖರೀದಿ ದರ ನಿಗದಿಯಾಗಬೇಕಿದೆ ಎಂದರು.

 ಮಾರ್ಕೊಪೋಲೊದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಬಸ್‌ಗಳ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಉದ್ದಿಮೆಗಳ ಸಮಿತಿ ಕೂಡ ವರದಿ ಸಲ್ಲಿಸಿದೆ. ವರದಿಯನ್ನು ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ, ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಮತ್ತಿತರರು ಇದ್ದರು. 

ಫ್ಲೈಬಸ್‌ ಮಾದರಿಯಲ್ಲಿ ಬಸ್‌ ಸೇವೆ
ಫ್ಲೈ ಬಸ್‌ ಮಾದರಿಯಲ್ಲಿ ಕೆಎಸ್‌ಆರ್‌ಟಿಸಿಯ ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣದಿಂದ ನಗರದ ವಿವಿಧ ಸ್ಥಳಗಳಿಗೆ ನೇರವಾಗಿ ಬಸ್‌ ಸಂಪರ್ಕ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ಹೆಚ್ಚು ಜನರಿಗೆ ಅನುಕೂಲ ಆಗಲಿದೆ. ಇದಲ್ಲದೆ, ಕೆ.ಆರ್‌.ಪುರದಲ್ಲೂ ಬಿಎಂಟಿಸಿ ಟಿಟಿಎಂಸಿ ನಿರ್ಮಿಸಲಾಗುವುದು. ಇದರಿಂದ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ಅನಗತ್ಯವಾಗಿ ನಗರದ ಹೃದಯಭಾಗಕ್ಕೆ ಬರುವ ಗೋಳು ತಪ್ಪಲಿದೆ. ಸಂಚಾರದಟ್ಟಣೆಯೂ ತಗ್ಗಲಿದೆ ಎಂದು ಸಚಿವ ರೇವಣ್ಣ ಮಾಹಿತಿ ನೀಡಿದರು.

ಡಬಲ್‌ ರೈಡಿಂಗ್‌ ನಿಯಮಕ್ಕೆ ತಿದ್ದುಪಡಿ
100 ಸಿಸಿಗಿಂತ ಕಡಿಮೆ ಸಾಮರ್ಥ್ಯ ಇರುವ ದ್ವಿಚಕ್ರ ವಾಹನಗಳಲ್ಲಿ ಡಬಲ್‌ ರೈಡಿಂಗ್‌ ನಿಷೇಧಕ್ಕೆ ಸಂಬಂಧಿಸಿದ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಆದೇಶದಂತೆ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಡಬಲ್‌ ಸೀಟುಗಳಿರುವ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಈ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next