ಮಂಗಳೂರು: ಎರಡು ದಿನದ, ಸುಮಾರು 2.3 ಕೆ.ಜಿ. ತೂಕದ ನೀಲಿ ಬಣ್ಣದ ಮಗುವಿಗೆ ಎದುರಾದ ಹೃದಯ ಸಂಬಂಧಿ ಸಮಸ್ಯೆಗೆ ನಗರದ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಕ್ಕಳ ಹೃದ್ರೋಗ ತಜ್ಞರಾದ ಡಾ| ಪ್ರೇಮ್ ಆಳ್ವ ಅವರು 5ನೇತಿಂಗಳ ಭ್ರೂಣದ ಇಕೋ ಕಾರ್ಡಿಯೋ ಗ್ರಫಿ ನಡೆಸಿದಾಗ ಮಗುವಿನ ಮಹಾ ಅಪಧಮನಿ ಸ್ಥಳಾಂತರ ಹೊಂದಿರುವುದನ್ನು ಪತ್ತೆ ಹಚ್ಚಲಾಗಿತ್ತು. ಹೃದಯ
ದಿಂದ ಹೊರಹೊಮ್ಮುವ ಎರಡು ಮುಖ್ಯ ರಕ್ತನಾಳಗಳು ಸಂಪರ್ಕಿಸ ಬೇಕಾದ ಕೋಣೆಗಳನ್ನು ಬಿಟ್ಟು ಹೃದಯದ ತಪ್ಪು ಕೋಣೆಗಳನ್ನು ಸಂಪರ್ಕಿಸಿರುವ ಸ್ಥಿತಿ ಇತ್ತು. ಈ ಸ್ಥಿತಿಯಲ್ಲಿ ದೇಹದ ಪೋಷಣೆಗೆ ಅಗತ್ಯವಿರುವ ಆಮ್ಲಜನಕ ಪೂರೈಸುವ ರಕ್ತ ಹೃದಯದ ಬದಲು ಮರಳಿ ಶ್ವಾಸಕೋಶ ಸೇರುತ್ತಿತ್ತು. ಈ ಸ್ಥಿತಿ ಸರಿಪಡಿಸಲು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿತ್ತು.
ಹೃದ್ರೋಗ ಸಮಸ್ಯೆಯಿಂದ ಜನಿಸುವ ಶಿಶುಗಳಲ್ಲಿ ಸುಮಾರು ಶೇ. 5ರಷ್ಟು ಇಂತಹ ಸ್ಥಿತಿ ಹೊಂದಿರುವ ಮಕ್ಕಳು ಜನಿಸುತ್ತಾರೆ. ಈ ಸ್ಥಿತಿ ಸರಿ ಪಡಿಸಲು ಮಗು ಹುಟ್ಟಿದ ತತ್‌ಕ್ಷಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಗೌರವ್ ಎಸ್. ಶೆಟ್ಟಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಇಂತಹ ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೀಗಾಗಿ ಈ ಮಗುವಿನ ಹೆತ್ತವರೊಡನೆ ಸಮಾಲೋಚಿಸಿ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಂಕೀರ್ಣತೆ ಮತ್ತು ಶಸ್ತ್ರಚಿಕಿತ್ಸೆಗೆ ಬೇಕಾದ ಪರಿಣತಿ ವಿವರಿಸಿದರು.
ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಡಾ| ಗೌರವ್ ಎಸ್. ಶೆಟ್ಟಿ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಅವರ ತಂಡದವರಾದ ಡಾ| ಗುರುರಾಜ್ ತಂತ್ರಿ, ಮುಖ್ಯ ಅರಿವಳಿಕೆ ತಜ್ಞರು ಮತ್ತು ಡಾ| ಸುಹಾಸ್ ಅರಿವಳಿಕೆ ತಜ್ಞರ ಸಹ ಯೋಗದೊಂದಿಗೆ ನಡೆಸಿದ್ದು, ಮಗು ವನ್ನು ಎದೆಗೂಡಿನ ತೀವ್ರ ನಿಗಾ ಘಟಕದಲ್ಲಿ ಯಶಸ್ವಿಯಾಗಿ ನಿಗಾವಹಿಸಿದ್ದರು.
ಮಗುವನ್ನು 7ನೇ ದಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಒಂದು ವಾರದ ಅನಂತರ ಮರು ಪರಿಶೀಲನೆಗೆ ಒಳಪಡಿಸಿದಾಗ ಮಗು ಆರೋಗ್ಯದಿಂದಿದೆ ಎಂದು ಆಸ್ಪತ್ರೆ ಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.