ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ನಟ ದರ್ಶನ್‌ನ ಪ್ರೇಯಸಿ ಪವಿತ್ರಾ ಗೌಡಗೆ ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಖಾತೆಯಿಂದ 2 ಕೋಟಿ ರೂ. ವರ್ಗಾವಣೆ ಆಗಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೂ ಈ ಹಣದ ವರ್ಗಾವಣೆಗೂ ಯಾವುದಾದರೂ ಸಂಬಂಧ ಇದೆಯಾ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜಾಜಿನಗರದಲ್ಲಿರುವ ಬ್ಯಾಂಕ್‌ವೊಂದರಲ್ಲಿನ ಪವಿತ್ರಾ ಪಿ. ಎಂಬ ಖಾತೆಗೆ 2017ರಲ್ಲಿ 1 ಕೋಟಿ ರೂ. ಮತ್ತು 2018ರಲ್ಲಿ 1 ಕೋಟಿ ರೂ. ಅನ್ನು ಸೌಂದರ್ಯ ಜಗದೀಶ್ ವರ್ಗಾವಣೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಹಾಗೂ ಹಣ ವರ್ಗಾವಣೆಯಾದ ಪಿ. ಪವಿತ್ರಾ ಇಬ್ಬರೂ ಒಬ್ಬರೆಯಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಂಚನೆ ದೂರು ಕೊಟ್ಟಿದ್ದ ಜಗದೀಶ್ ಪತ್ನಿ
ಇದೇ ವರ್ಷ ಎಪ್ರಿಲ್ 14ರಂದು ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿದ್ದರು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. 60 ಕೋಟಿ ರೂ. ವಂಚನೆಯಿಂದ ಪತಿ ನೊಂದಿದ್ದರು ಎಂದು ಆರೋಪಿಸಿ ಮೇ 24ರಂದು ಜಗದೀಶ್ ಅವರ ಪತ್ನಿ ಶಶಿರೇಖಾ ಇದೇ ಠಾಣೆಗೆ ದೂರು ನೀಡಿದ್ದರು. ಪ್ರತ್ಯೇಕ ದೂರು ನೀಡಿದ್ದರಿಂದ ಆತ್ಮಹತ್ಯೆ ಪ್ರಚೋದನೆ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದರು.
ಈ ಮಧ್ಯೆ ಸೌಂದರ್ಯ ಜಗದೀಶ್ ಸೌಂದರ್ಯ ಕನ್‌ಸ್ಟ್ರಕ್ಷನ್ ಕಂಪೆನಿ ನಡೆಸುತ್ತಿದ್ದು, ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪೆನಿಯ ಸಹ ಪಾಲುದಾರರಾಗಿದ್ದರು. ತಮ್ಮ ಕೆಲವು ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು 60 ಕೋಟಿ ರೂ. ಸಾಲ ಪಡೆದ ಜಗದೀಶ್ ಅದನ್ನು ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರು. ಕಂಪೆನಿ ನಷ್ಟದಲ್ಲಿರುವುದಾಗಿ ಹೇಳಿದ್ದ ಸಹ ಪಾಲುದಾರರು 60 ಕೋಟಿ ರೂ. ವಂಚಿಸಿದ್ದರು ಎಂದು ಹೇಳಲಾಗಿದೆ. ಸಹ ಪಾಲುದಾರರು ಜೀವ ಬೆದರಿಕೆಯೊಡ್ಡಿದ್ದರಿಂದಲೇ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಪತ್ನಿ ಶಶಿರೇಖಾ ದೂರಿನಲ್ಲಿ ಆರೋಪಿಸಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2 ಕೋಟಿ ರೂ.ಗಳಲ್ಲೇ ಪವಿತ್ರಾ ಮನೆ ಖರೀದಿ?
ಸೌಂದರ್ಯ ಜಗದೀಶ್ ವ್ಯವಹಾರದ ಪಾಲುದಾರರಾಗಿರುವ ಸುರೇಶ್ ಅವರು ಜಗದೀಶ್ ವ್ಯವಹಾರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯಲ್ಲಿ ಸೌಂದರ್ಯ ಜಗದೀಶ್ ಪಿ. ಪವಿತ್ರಾ ಅವರಿಗೆ 2 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ. ಈ ಹಣದಲ್ಲಿ ಪವಿತ್ರಾ ಗೌಡ 2018ರಲ್ಲಿ ಆರ್.ಆರ್. ನಗರದಲ್ಲಿ 1.75 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದರು ಎಂದು ಹೇಳಲಾಗಿದೆ.