ಚನ್ನರಾಯಪಟ್ಟಣ/ಬಾಗೂರು: ಬಾಗೂರು ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಬಾಗೂರು ಹೋಬಳಿಯ ದ್ಯಾವೇನಹಳ್ಳಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ರಸಗೊಬ್ಬರ, ಪಹಣಿಗಳ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ, ಮಂಗಳವಾರದಿಂದ ದ್ಯಾವೇನಹಳ್ಳಿ ಸಂಘದಲ್ಲಿ ಪಡಿತರ ಆಹಾರವನ್ನು ನೀಡಲಾಗುವುದು ಎಂದರು.
ಇತ್ತೀಚಿನ ಆಧುನಿಕ ಕೃಷಿಯಿಂದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿ ನಾಶಕ ಹೆಚ್ಚು ಬಳಕೆ ಮಾಡುತ್ತಿದ್ದು ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಕ್ರಿಮಿನಾಶಕ ಸಿಂಪಡಣೆ ಮಾಡುವುದರಿಂದ ಗಾಳಿಯಲ್ಲಿ ಬೆರೆತು ವಾತಾವರಣ ಮಾಲಿನ್ಯಗೊಂಡಿದೆ ಪರಸರ ಹಾಳಾಗಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿವೆ, ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಗ್ಯದ ಹಿತದೃಷ್ಟಿಯಿಂದ ರೈತರು ನಿಮ್ಮ ಬೆಳೆಗಳಿಗೆ ಜೈವಿಕ ಗೊಬ್ಬರ ಬಳಸಿ, ಸಾವಯವ ಕೃಷಿಗೆ ಪ್ರಾಮುಖ್ಯತೆ ನೀಡ ಬೇಕು, ರಸಗೊಬ್ಬರ ನಿಯಂತ್ರಿಸುವುದು ಒಳಿತು, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ರೈತರು ಅಧಿಕ ಲಾಭ ಪಡೆಯಬಹುದಾಗಿದೆ, ಈ ಬಗ್ಗೆ ಸಾವಯವ ಸಂಘ ರಚನೆ ಮಾಡಿಕೊಂಡು ಕೃಷಿ ಮಾಡಲು ಎಲ್ಲರೂ ಮುಂದಾಗುವಂತೆ ಸಲಹೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ಮುಖಂಡರಾದ ನಾಗರಾಜ್, ಶಿವಣ್ಣ, ಹಿರಿಯಣ್ಣ, ಶ್ರೀನಾಥ್, ತಿಮ್ಮಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಡಿ.ಎನ್.ಆನಂದ್ ಇದ್ದರು.