ವಿಜಯಪುರ: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರದ ಜೊತೆ ಕೈಜೋಡಿಸಲು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಅಗಿರುವ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.
ಸೋಮವಾರ ಡಿಸಿಸಿ ಬ್ಯಾಂಕ್ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇಂದು ನಡೆದ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು.
ಸಹಕಾರಿ ಸಚಿವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿಗೆ ಸಮಯ ನಿಗದಿ ಮಾಡಿ ದೇಣಿಗೆಯ ಚೆಕ್ ಹಸ್ತಾಂತರ ಮಾಡುವುದಾಗಿ ಹೇಳಿದರು.
ಇದಲ್ಲದೇ ಜಿಲ್ಲೆಯ ವಿವಿಧ 288 ಸಹಕಾರಿ ಸಂಘಗಳು ಸಂಗ್ರಹಿಸಿರುವ 58 ಲಕ್ಷ ರೂ. ಹಣದ ಚೆಕ್ ಗಳನ್ನು ಜಿಲ್ಲಾ ಸಹಕಾರಿ ನಿಬಂಧಕರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಹಸ್ತಾಂತರ ಮಾಡಲಾಗಿದೆ ಎಂದು ವಿವರಿಸಿದರು.
ಈ ಹಿಂದೆ ದೇಶದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳಾದ ಸುನಾಮಿ, ಭೂಕಂಪ, ಪ್ರವಾಹ, ಕಾರ್ಗಿಲ್ ಯುದ್ಧದಂಥ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸದಾ ಸರ್ಕಾರದ ಜೊತೆ ಕೈ ಜೋಡಿಸಿದೆ ಎಂದರು.
ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಎಸ್.ಎಸ್.ಶಿಂಧೆ, ಸಂಯುಕ್ತ ಪಾಟೀಲ, ಶೇಖರ ದಳವಾಯಿ, ಸೋಮನಗೌಡ ಬಿರಾದಾರ, ಕಲ್ಲನಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಹನುಮಂತರಾಯ ಗೌಡ ಪಾಟೀಲ, ಪ್ರಧಾನ ವ್ಯವಸ್ಥಾಪಕ ಕೆ.ವಿ.ರಾಜಣ್ಣ, ಇತರರು ಉಪಸ್ಥಿತರಿದ್ದರು.