ಅಹ್ಮದಾಬಾದ್ : ರಾಜ್ಯಸಭೆಯ ಎರಡು ಸ್ಥಾನಗಳಿಗೆ ಇಂದು ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ ಹಾಕಿದ ಕಾಂಗ್ರೆಸ್ ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಧವಳಸಿಂಗ್ ಝಾಲಾ ಅವರು ಗುಜರಾತ್ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.
ದೇಶವನ್ನು ಯಶಸ್ಸಿನ ಹೊಸ ಎತ್ತರಕ್ಕೆ ಒಯ್ಯಲು ಬಯಸಿರುವ ದೇಶದ ಪ್ರಾಮಾಣಿಕ ರಾಷ್ಟ್ರೀಯ ನಾಯಕತ್ವಕ್ಕೆ ನಾನು ಮತ ಹಾಕಿದ್ದೇನೆ. ನನ್ನ ಆಂತರ್ಯದ ಧ್ವನಿಗೆ ಅನುಗುಣವಾಗಿ ನಾನು ಮತ ಚಲಾಯಿಸಿದ್ದೇನೆ’ ಎಂದು ಅಲ್ಪೇಶ್ ಠಾಕೂರ್ ವಿಧಾನಸಭೆಗೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
“ಕಾಂಗ್ರೆಸ್ ನಲ್ಲಿದ್ದು ನಾನು ಮಾನಸಿಕ ಒತ್ತಡವನ್ನಲ್ಲದೆ ಬೇರೇನನ್ನೂ ಪಡೆದಿಲ್ಲ; ಈಗ ನಾನು ಎಲ್ಲ ಹೊರೆಯಿಂದ ಮುಕ್ತನಾಗಿದೇನೆ” ಎಂದು ಒಬಿಸಿ ನಾಯಕ ಅಲ್ಪೇಶ್ ಹೇಳಿದರು.
ಗುಜರಾತ್‌ನ ಎರಡು ರಾಜ್ಯಸಭಾ ಸೀಟುಗಳ ಉಪಚುನಾವಣೆಗೆ ಇಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಗಾಂಧೀನಗರದಲ್ಲಿನ ರಾಜ್ಯ ವಿಧಾನಹಾ ಸಂಕೀರ್ಣದಲ್ಲಿ ಮತದಾನ ಆರಂಭಗೊಂಡು ಸಂಜೆ 4ರ ವರೆಗೆ ಮತದಾನ ನಡೆಯಿತು.
ಬಿಜೆಪಿ ತನ್ನ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರನ್ನು ಮತ್ತು ಒಬಿಸಿ ನಾಯಕ ಜುಗಲಾಜಿ ಠಾಕೋರ್ ಅವರನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಚಂದ್ರಿಕಾ ಚುಡಾಸಮೂ ಮತ್ತು ಗೌರವ್ ಪಾಂಡ್ಯ ಕಣದಲ್ಲಿದ್ದರು.