ಹೊಸದಿಲ್ಲಿ: ಸಂವಿಧಾನದ ಕನಿಷ್ಠ ಎರಡು ನಿಬಂಧನೆಗಳಿಗೆ ತಿದ್ದುಪಡಿ ತಂದು, ಅದಕ್ಕೆ ರಾಜ್ಯಗಳು ಸಮ್ಮತಿ ನೀಡಿದರೆ, 2019ರ ಆರಂಭದಲ್ಲೇ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಬಹುದು ಎಂದು ಕಾನೂನು ಆಯೋಗ ಹೇಳಿದೆ. ಜನಪ್ರತಿನಿಧಿ ಕಾಯ್ದೆಯ ಕೆಲವು ನಿಬಂಧನೆಗಳಿಗೂ ಸಂಸತ್‌ನಲ್ಲಿ ಸರಳ ಬಹುಮತದೊಂದಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದೂ ಆಯೋಗ ತಿಳಿಸಿದೆ.
ಈ ಕುರಿತು ತಯಾರಿಸಿದ ಟಿಪ್ಪಣಿಯನ್ನು ಮಂಗಳವಾರ ಸಾರ್ವಜನಿಕ ವೇದಿಕೆಯಲ್ಲಿಟ್ಟಿರುವ ಆಯೋಗ, ವರದಿಯನ್ನು ಅಂತಿಮಗೊಳಿಸುವ ಮುನ್ನ ಸಂವಿಧಾನ ತಜ್ಞರು, ರಾಜಕೀಯ ಪಕ್ಷಗಳು ಹಾಗೂ ಸಂಬಂಧಿಸಿದ ಇತರರ ಅಭಿಪ್ರಾಯವನ್ನು ಕೋರಿದೆ. ಮೇ 8ರೊಳಗೆ ಇವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಹೇಳಿದೆ. ಆಯೋಗದ ಟಿಪ್ಪಣಿಯಂತೆ, ಏಕಕಾಲದ ಚುನಾವಣೆ 2 ಹಂತಗಳಲ್ಲಿ ನಡೆಯಲಿದ್ದು, 2ನೇ ಹಂತ 2024ರಲ್ಲಿ ನಡೆಯಲಿದೆ.
ಎರಡು ತಿದ್ದುಪಡಿ: ಲೋಕಸಭೆ ಮತ್ತು ವಿಧಾನಸಭೆಗಳ ಅವಧಿಗೆ ಸಂಬಂಧಿಸಿದ ಸಂವಿಧಾನದ 83(2)ನೇ ವಿಧಿ ಮತ್ತು 172(1)ನೇ ವಿಧಿ ಹಾಗೂ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಕಾನೂನು ಆಯೋಗ ಇಟ್ಟಿದೆ. ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಉದ್ದೇಶವೂ ಇದರಲ್ಲಿ ಸೇರಿದೆ. ಒಂದು ವೇಳೆ ಸರಕಾರವು ಅವಧಿ ಮಧ್ಯೆಯೇ ಉರುಳಿದರೆ, ಅನಂತರ ಬರುವ ಹೊಸ ಸರಕಾರವು ಉಳಿದ ಅವಧಿಯವರೆಗಷ್ಟೇ ಕಾರ್ಯನಿರ್ವಹಿಸಬೇಕೇ ಹೊರತು, ಹೊಸದಾಗಿ 5 ವರ್ಷ ಆಡಳಿತ ನಡೆಸುವಂತಿಲ್ಲ ಎಂದೂ ಆಯೋಗದ ಟಿಪ್ಪಣಿಯಲ್ಲಿ ಹೇಳಲಾಗಿದೆ.
ಯಾವ ರಾಜ್ಯಗಳಿಗೆ ಯಾವಾಗ ಚುನಾವಣೆ?: ಮೊದಲ ಹಂತದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ, ಉತ್ತರಪ್ರದೇಶ, ಗುಜರಾತ್, ಕರ್ನಾಟಕ, ದಿಲ್ಲಿ ಮತ್ತು ಪಂಜಾಬ್ ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿವೆ. 2ನೇ ಹಂತದಲ್ಲಿ ಚುನಾವಣೆ ಎದುರಿಸುವ ರಾಜ್ಯಗಳ ವಿಧಾನಸಭೆ ಅವಧಿಯನ್ನು ವಿಸ್ತರಿಸಬೇಕಾಗುತ್ತದೆ ಎಂದೂ ಆಯೋಗದ ಟಿಪ್ಪಣಿ ಹೇಳಿದೆ.