ಕೊಳ್ಳೇಗಾಲ: ತಾಲೂಕಿನ ಆರು ಗ್ರಾಮಗಳಿಗೆ ವಿವಿಧ ಯೋಜನೆಯಡಿ ಮಂಜೂರಾಗಿದ್ದ ಸುಮಾರು 2.93 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎನ್.ಮಹೇಶ್ ಭೂಮಿ ಪೂಜೆ ನೆರವೇರಿಸಿದರು.
ಎಲ್ಲೆಲ್ಲಿ ಎಷ್ಟೆಷ್ಟು ವೆಚ್ಚದ ಕಾಮಗಾರಿ?: ತಾಲೂಕಿನ ಹರಳೆ ಗ್ರಾಮದಲ್ಲಿ ಜಿಪಂ ವತಿಯಿಂದ ಮಂಜೂರಾಗಿದ್ದ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ 50 ಲಕ್ಷ, ಹೊಸ ಹಂಪಾಪುರ ಅಂಗನವಾಡಿ ಕೇಂದ್ರ ನೂತನ ಕಟ್ಟಡ ನಿರ್ಮಾಣಕ್ಕೆ 9.17 ಲಕ್ಷ, ಅದರ ಮೇಲ್ಭಾಗದಲ್ಲಿ 10 ಲಕ್ಷ ರೂ. ಅಂದಾಜಿನಲ್ಲಿ ಸ್ವಸಹಾಯ ಸಂಘಗಳ ಸಭಾಂಗಣ, ಬೆಂಡರಹಳ್ಳಿ ಟಿಎಸ್‌ಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ 10 ಲಕ್ಷ, ಗೊಬ್ಬಳೀಪುರ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ 95 ಲಕ್ಷ, ಟಗರಪುರ ಟಿಎಸ್ಪಿ ಮತ್ತು ಎಸ್‌ಸಿಪಿ ನವಗ್ರಾಮ ಯೋಜನೆ ಬುಡಕಟ್ಟು ಯೋಜನೆಯಡಿ ಒಟ್ಟು 28 ಲಕ್ಷ ಸೇರಿ 2.93 ಕೋಟಿ ರೂ. ಅಂದಾಜಿನಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಮಾಹಿತಿ ನೀಡಿದರು.
ಗುಣಮಟ್ಟ ಕಾಮಗಾರಿಗೆ ಮುಂದಾಗಿ: ವಿವಿಧ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ, ಲ್ಯಾಂಡ್ ಆರ್ಮಿ, ನಗರಸಭೆಗಳಿಗೆ ವಹಿಸಲಾಗಿದ್ದು, ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಪಂ ಅಧ್ಯಕ್ಷರು, ಸದಸ್ಯರು ಕಾಮಗಾರಿಗಳತ್ತ ಗಮನ ಹರಿಸಿ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಗಮನ ಹರಿಸಬೇಕೆಂದು ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ಹಲವಾರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತು ರಸ್ತೆಗಳ ಕೊರತೆ, ಅನೈರ್ಮಲ್ಯ ತಾಂಡವವಾಡುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ ನೀಡುವುದಾಗಿ ತಿಳಿಸಿದರು.
ಹಲವೆಡೆ ಭೂಮಿ ಪೂಜೆ: ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜು ಮಾತನಾಡಿ, ಹಲವೆಡೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆದಿವೆ. ಆದರೆ, ಕಾಮಗಾರಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲವೆಡೆ ಸ್ಥಗಿತಗೊಂಡಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು ಚುರುಕು ಗೊಳಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಭೂಮಿ ಪೂಜೆಯಲ್ಲಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲತಾ, ತಾಪಂ ಸದಸ್ಯರಾದ ಪದ್ಮಾ, ಕೃಷ್ಣಪ್ಪ, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಲ್ಯಾಂಡ್ ಆರ್ಮಿ ಎಇಇ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.