Advertisement

2-0 cleansweep; ಮಿಂಚಿದ ಕ್ಯಾರಿ: ಆಸೀಸ್‌ ಜಯಭೇರಿ

12:36 AM Mar 12, 2024 | Team Udayavani |

ಕ್ರೈಸ್ಟ್‌ಚರ್ಚ್‌: ಕೀಪರ್‌ ಅಲೆಕ್ಸ್‌ ಕ್ಯಾರಿ, ಮಿಚೆಲ್‌ ಮಾರ್ಷ್‌ ಮತ್ತು ನಾಯಕ ಪ್ಯಾಟ್‌ ಕಮಿನ್ಸ್‌ ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ 3 ವಿಕೆಟ್‌ಗಳ ಸೋಲುಣಿಸಿದ ಆಸ್ಟ್ರೇಲಿಯ, ಸರಣಿಯನ್ನು 2-0 ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.

Advertisement

ಅಲೆಕ್ಸ್‌ ಕ್ಯಾರಿ ಅಜೇಯ 98, ಮಿಚೆಲ್‌ ಮಾರ್ಷ್‌ 80 ಮತ್ತು ಪ್ಯಾಟ್‌ ಕಮಿನ್ಸ್‌ ಅಜೇಯ 32 ರನ್‌ ಬಾರಿಸಿ ಆಸ್ಟ್ರೇಲಿಯಕ್ಕೆ ಸ್ಮರಣೀಯ ಜಯವೊಂದನ್ನು ತಂದಿತ್ತರು. ಗೆಲುವಿಗೆ 279 ರನ್ನುಗಳ ಕಠಿನ ಗುರಿ ಪಡೆದಿದ್ದ ಆಸ್ಟ್ರೇಲಿಯ 7 ವಿಕೆಟಿಗೆ 281 ರನ್‌ ಬಾರಿಸಿ ಗೆದ್ದು ಬಂದಿತು. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು 172 ರನ್ನುಗಳಿಂದ ಜಯಿಸಿತ್ತು.

ಬದಲಾಯಿತು ಚಿತ್ರಣ
3ನೇ ದಿನದಾಟದ ಅಂತ್ಯಕ್ಕೆ ಆಸೀಸ್‌ 77 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿತ್ತು. ಪಂದ್ಯ ರೋಚಕ ಘಟ್ಟದಲ್ಲಿತ್ತು. ಈ 4 ವಿಕೆಟ್‌ 34 ರನ್ನಿಗೇ ಬಿದ್ದಿತ್ತು. ಸೋಮವಾರ ಸ್ಕೋರ್‌ 80ಕ್ಕೆ ಏರಿದಾಗ ಟ್ರ್ಯಾವಿಸ್‌ ಹೆಡ್‌ ಔಟಾದರು. ನ್ಯೂಜಿಲ್ಯಾಂಡ್‌ನ‌ ಗೆಲುವಿನ ಸಾಧ್ಯತೆ ಹೆಚ್ಚಿತು.

ಆದರೆ 6ನೇ ವಿಕೆಟಿಗೆ ಜತೆಗೂಡಿದ ಮಿಚೆಲ್‌ ಮಾರ್ಷ್‌ ಮತ್ತು ಅಲೆಕ್ಸ್‌ ಕ್ಯಾರಿ ಕ್ರೀಸಿಗೆ ಅಂಟಿಕೊಳ್ಳುವುದರೊಂದಿಗೆ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಆಸೀಸ್‌ ಸ್ಕೋರ್‌ಬೋರ್ಡ್‌ನಲ್ಲಿ ಪ್ರಗತಿ ಆಗುತ್ತ ಹೋಯಿತು. ಇವರಿಂದ ಭರ್ತಿ 150 ರನ್‌ ಒಟ್ಟುಗೂಡಿತು. ಸ್ಕೋರ್‌ 220ಕ್ಕೆ ಏರಿತು. ಆಗ 102 ಎಸೆತಗಳಿಂದ 80 ರನ್‌ ಮಾಡಿದ ಮಾರ್ಷ್‌ ಅವರನ್ನು ಬೆನ್‌ ಸಿಯರ್ ಪೆವಿಲಿಯನ್ನಿಗೆ ಕಳುಹಿಸಿದರು. ಮುಂದಿನ ಎಸೆತದಲ್ಲೇ ಮಿಚೆಲ್‌ ಸ್ಟಾರ್ಕ್‌ (0) ವಿಕೆಟ್‌ ಹಾರಿಸಿದರು. ಕಿವೀಸ್‌ ಮತ್ತೆ ಮೇಲುಗೈ ಸಾಧಿಸಿತು. ಆದರೆ ಅದೃಷ್ಟ ಮಾತ್ರ ಆಸೀಸ್‌ ಪಾಳೆಯದಲ್ಲೇ ಕುಳಿತಿತ್ತು.

8ನೇ ವಿಕೆಟಿಗೆ ಜತೆಗೂಡಿದ ಕ್ಯಾರಿ-ಕಮಿನ್ಸ್‌ ಮತ್ತೂಂದು ಸುತ್ತಿನ ಹೋರಾಟವನ್ನು ಜಾರಿಯಲ್ಲಿರಿಸಿದರು. 61 ರನ್‌ ಒಟ್ಟುಗೂಡಿಸಿ ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ನ್ಯೂಜಿಲ್ಯಾಂಡ್‌ ತವರಲ್ಲೇ ವೈಟ್‌ವಾಶ್‌ ಸಂಕಟಕ್ಕೆ ಸಿಲುಕಿತು.

Advertisement

ಎರಡನೇ ಸ್ಥಾನಕ್ಕೇರಿದ ಆಸ್ಟ್ರೇಲಿಯ
ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡ ಆಸ್ಟ್ರೇಲಿಯ ನೂತನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಆಸ್ಟ್ರೇಲಿಯದ ಗೆಲುವಿನ ಪ್ರತಿಶತ ಸಾಧನೆ 59.09ರಿಂದ 62.50ಗೆ ಏರಿತು.

Advertisement

Udayavani is now on Telegram. Click here to join our channel and stay updated with the latest news.

Next