Advertisement

ಮುಂಬೈ-ಚೆನ್ನೈ: ಜೈ ಹೇಳಿದವರಿಗೆ ಫೈನಲ್‌

09:24 AM May 10, 2019 | Team Udayavani |

ಚೆನ್ನೈ: ಐಪಿಎಲ್‌ ಪಂದ್ಯಾವಳಿ ಪ್ಲೇ ಆಫ್ ಸ್ಪರ್ಧೆಗಳತ್ತ ಹೊರಳಿದೆ. ಮಂಗಳವಾರದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಲೀಗ್‌ ಹಂತದ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್‌ ಮತ್ತು ದ್ವಿತೀಯ ಸ್ಥಾನಿಯಾಗಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಪರಸ್ಪರ ಸೆಣಸಾಡಲಿವೆ. ಇದು ಪ್ರಸಕ್ತ ಐಪಿಎಲ್‌ನ ಈ ವರೆಗಿನ ದೊಡ್ಡ ಕದನವಾಗುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಗೆದ್ದ ತಂಡ ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಲಿರುವುದರಿಂದ ಕುತೂಹಲ ಮುಗಿಲು ಮುಟ್ಟಿದೆ.

Advertisement

ಚೆನ್ನೈ ಓಟಕ್ಕೆ ಮುಂಬೈ ಬ್ರೇಕ್‌
ಚೆನ್ನೈ ಹ್ಯಾಟ್ರಿಕ್‌ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಆರ್‌ಸಿಬಿ, ಡೆಲ್ಲಿ ಮತ್ತು ರಾಜಸ್ಥಾನ್‌ಗೆ ಸೋಲುಣಿಸಿ ನಾಗಾ ಲೋಟಗೈದಿತ್ತು. ಹಾಲಿ ಚಾಂಪಿಯನ್ನರ ಈ ಗೆಲುವಿನ ಆಟಕ್ಕೆ ಕಡಿವಾಣ ಹಾಕಿದ್ದೇ ಮುಂಬೈ!
ಎ. ಮೂರರಂದು ಚೆನ್ನೈಯಲ್ಲೇ ನಡೆದ ಪಂದ್ಯದಲ್ಲಿ ಧೋನಿ ಪಡೆಯನ್ನು 37 ರನ್ನುಗಳಿಂದ ಕೆಡವಿದ ಮುಂಬೈ, ಐಪಿಎಲ್‌ನಲ್ಲಿ ತನ್ನ 100ನೇ ಗೆಲುವು ದಾಖಲಿಸಿದ್ದು ಈಗ ಇತಿಹಾಸ. ಬಳಿಕ “ವಾಂಖೇಡೆ’ಯಲ್ಲಿ ನಡೆದ ಮರು ಪಂದ್ಯದಲ್ಲೂ ಚೆನ್ನೈಗೆ ಗೆಲ್ಲಲಾಗಲಿಲ್ಲ. ಇದನ್ನು 46 ರನ್ನುಗಳಿಂದ ಕಳೆದುಕೊಂಡಿತು. ಧೋನಿ ಗೈರಲ್ಲಿ ಸುರೇಶ್‌ ರೈನಾ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.

ಮುಂಬೈ ಬೌಲಿಂಗ್‌ ಬಲಿಷ್ಠ
ಚೆನ್ನೈ ತವರಿನಂಗಳದಲ್ಲಿ ಮೇಲುಗೈ ಸಾಧಿಸ ಬೇಕಾದರೆ ಮುಂಬೈ ಬೌಲಿಂಗ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುವುದು ಮುಖ್ಯ. ಚೆನ್ನೈಗೆ ಹೋಲಿಸಿದರೆ ಮುಂಬೈ ಬೌಲಿಂಗ್‌ ಹೆಚ್ಚು ಬಲಿಷ್ಠ. ಬುಮ್ರಾ (17 ವಿಕೆಟ್‌), ಮಾಲಿಂಗ (15 ವಿಕೆಟ್‌), ಪಾಂಡ್ಯ ಬ್ರದರ್ (ಒಟ್ಟು 24 ವಿಕೆಟ್‌), ಲೆಗ್ಗಿ ರಾಹುಲ್‌ ಚಹರ್‌ (10 ವಿಕೆಟ್‌) ಈ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂಬೈ ಬ್ಯಾಟಿಂಗ್‌ ಕೂಡ ಪವರ್‌ಫ‌ುಲ್‌. ಡಿ ಕಾಕ್‌ (492 ರನ್‌), ನಾಯಕ ರೋಹಿತ್‌ ಶರ್ಮ (386 ರನ್‌), ಹಾರ್ದಿಕ್‌ ಪಾಂಡ್ಯ (380) ಉತ್ತಮ ಲಯದಲ್ಲಿದ್ದಾರೆ. ಇವರೊಂದಿಗೆ ಪೊಲಾರ್ಡ್‌ ಕೂಡ ಸಿಡಿದರೆ ಮುಂಬೈಯನ್ನು ತಡೆಯುವುದು ಕಷ್ಟ.

ಚೆನ್ನೈ ಅಸ್ಥಿರ ಬ್ಯಾಟಿಂಗ್‌
ಕೆಕೆಆರ್‌ ವಿರುದ್ಧ ಮೊಹಾಲಿ ಸೋಲಿನೊಂದಿಗೆ ಲೀಗ್‌ ಹಂತ ಮುಗಿಸಿದ ಚೆನ್ನೈ, ಈ ಆಘಾತ ದಿಂದಲೂ ಹೊರಬರಬೇಕಿದೆ. ಹಾಗೆಯೇ ತನ್ನ ಓಪನಿಂಗ್‌ ವೈಫ‌ಲ್ಯಕ್ಕೂ ಪರಿಹಾರ ಕಂಡು ಕೊಳ್ಳಬೇಕಿದೆ. ಡು ಪ್ಲೆಸಿಸ್‌, ವಾಟ್ಸನ್‌, ರೈನಾ ಕೆಲವು ಅರ್ಧ ಶತಕ ಹೊಡೆದರೂ ಸ್ಥಿರವಾದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಓಪನಿಂಗ್‌ ವಿಫ‌ಲವಾದಾಗಲೆಲ್ಲ ಧೋನಿಯೇ ನೆರವಿಗೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ರಾಯುಡು ಫಾರ್ಮ್ನಲ್ಲಿಲ್ಲ. ಕೇದಾರ್‌ ಜಾಧವ್‌ ಗಾಯಾಳಾಗಿದ್ದು, ಮುರಳಿ ವಿಜಯ್‌ ಅಥವಾ ಧ್ರುವ ಶೋರಿ ಅವಕಾಶ ಪಡೆಯಬಹುದು.

ಲೆಗ್ಗಿ ತಾಹಿರ್‌ (21 ವಿಕೆಟ್‌) ಚೆನ್ನೈನ ಪ್ರಧಾನ ಬೌಲರ್. ಹರ್ಭಜನ್‌, ಜಡೇಜ ತಲಾ 13 ವಿಕೆಟ್‌ ಉರುಳಿಸಿದರೂ ಘಾತಕವಾಗೇನೂ ಪರಿಣಮಿಸಿಲ್ಲ. ವೇಗಿ ರಬಾಡ (25 ವಿಕೆಟ್‌) ಇಲ್ಲದಿರುವುದೊಂದು ಕೊರತೆ.

Advertisement

ಇದು 50 - 50 ಮ್ಯಾಚ್
ಇವೆರಡೂ ಐಪಿಎಲ್‌ನ ಯಶಸ್ವಿ ತಂಡಗಳೆಂಬುದನ್ನು ಮರೆಯುವಂತಿಲ್ಲ. ಎರಡೂ ತಂಡಗಳು ತಲಾ 3 ಸಲ ಕಿರೀಟ ಏರಿಸಿಕೊಂಡಿವೆ. ಆದರೆ ಈ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಚೆನ್ನೈ ಆಟ ನಡೆದಿಲ್ಲ. ಮುಂಬೈ ಎದುರು ಆಡಿದ ಎರಡೂ ಪಂದ್ಯಗಳಲ್ಲಿ ಚೆನ್ನೈ ಲಾಗ ಹಾಕಿದೆ! ಚೆನ್ನೈ ತವರಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಈ ಬಾರಿ ತವರಿನಂಗಳದಲ್ಲಿ ಆಡಿದ 7 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ. ಏಕೈಕ ಸೋಲು ಎದುರಾದದ್ದು ಮುಂಬೈ ವಿರುದ್ಧ ಎನ್ನುವುದು ಧೋನಿ ಬಳಗಕ್ಕೆ ಎದುರಾಗಿರುವ ಸಣ್ಣದೊಂದು ಆತಂಕ. ಈ ಅವಳಿ ಸೋಲಿಗೆ ಮಂಗಳವಾರ ರಾತ್ರಿ ಸೇಡು ತೀರಿಸಿಕೊಳ್ಳುವುದು ಚೆನ್ನೈ ತಂಡದ ಯೋಜನೆ.

ಇನ್ನೊಂದೆಡೆ ಚೆನ್ನೈ ವಿರುದ್ಧ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿ ಎಲಿಮಿನೇಟರ್‌ ಪಂದ್ಯವನ್ನು ತಪ್ಪಿಸಿಕೊಳ್ಳಲು ಮುಂಬೈ ಗರಿಷ್ಠ ಪ್ರಯತ್ನ ಮಾಡುವುದು ಖಂಡಿತ. ಎರಡೂ ತಂಡಗಳು ಪ್ರಬಲವಾಗಿರುವುದರಿಂದ ತಮ್ಮ ಕಾರ್ಯತಂತ್ರವನ್ನು ಯಶಸ್ವಿಯಾಗಿಸುವುದರಲ್ಲಿ ಅನುಮಾನವಿಲ್ಲ. ಇಬ್ಬರಿಗೂ ಗೆಲುವು ಅಸಾಧ್ಯವೇನೂ ಅಲ್ಲ. ಎರಡೂ ನೆಚ್ಚಿನ ತಂಡಗಳೇ ಆಗಿವೆ. ಈ ಕಾರಣಕ್ಕಾಗಿ ಇದೊಂದು ಫಿಫ್ಟಿ-ಫಿಫ್ಟಿ ಮ್ಯಾಚ್‌.

Advertisement

Udayavani is now on Telegram. Click here to join our channel and stay updated with the latest news.

Next