Advertisement

ಲಂಕೆಯನ್ನು ಮಗುಚಿದ ಸ್ಪಿನ್‌-ಧವನ್‌

12:43 PM Aug 21, 2017 | Team Udayavani |

ಡಂಬುಲ: ಟೆಸ್ಟ್‌ ಸರಣಿಯ ವೈಭವವನ್ನು ಏಕದಿನದಲ್ಲೂ ಮುಂದುವರಿಸಿದ ಟೀಮ್‌ ಇಂಡಿಯಾ ಡಂಬುದಲ್ಲಿ ರವಿವಾರ ನಡೆದ ಮೊದಲ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ವಿಜೃಂಭಿಸಿದೆ. ಘಾತಕ ಸ್ಪಿನ್‌ ದಾಳಿ ಮತ್ತು ಆರಂಭಕಾರ ಶಿಖರ್‌ ಧವನ್‌ ಅವರ 11ನೇ ಶತಕ ಟೀಮ್‌ ಇಂಡಿಯಾದ ಗೆಲುವಿನ ಪ್ರಮುಖ ಆಕರ್ಷಣೆಯಾಗಿತ್ತು. ಈ ಪ್ರವಾಸದಲ್ಲಿ ಸತತ 4ನೇ ಸಲ ಟಾಸ್‌ ಗೆದ್ದ ವಿರಾಟ್‌ ಕೊಹ್ಲಿ ಮೊದಲು ಬೌಲಿಂಗನ್ನೇ ಆಯ್ದುಕೊಂಡರು. ಆರಂಭದಲ್ಲಿ ಲಂಕಾ ಬ್ಯಾಟಿಂಗ್‌ ಮೇಲುಗೈ ಸಾಧಿಸಿದಂತೆ ಕಂಡುಬಂದರೂ ಕೊನೆಯ 9 ವಿಕೆಟ್‌ಗಳನ್ನು ಪಟಪಟನೆ ಉರುಳಿಸಿಕೊಂಡು 43.2 ಓವರ್‌ಗಳಲ್ಲಿ 216 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಭಾರತ ಕೇವಲ 28.5 ಓವರ್‌ಗಳಲ್ಲಿ 1 ವಿಕೆಟಿಗೆ 220 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು.

Advertisement

ಧವನ್‌ ಶತಕ ಪರಾಕ್ರಮ
ಟೆಸ್ಟ್‌ ಸರಣಿಯಲ್ಲಿ ಬದಲಿ ಆಟಗಾರನಾಗಿ ಬಂದು 2 ಶತಕ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಎಡಗೈ ಆರಂಭಕಾರ ಶಿಖರ್‌ ಧವನ್‌ ಏಕದಿನದಲ್ಲೂ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಕೇವಲ 90 ಎಸೆತ ಎದುರಿಸಿದ ಅವರು 132 ರನ್‌ ಗಳಿಸಿ ಅಜೇಯರಾಗಿ ಉಳಿದರಲ್ಲದೇ ಮುರಿಯದ ಎರಡನೇ ವಿಕೆಟಿಗೆ ನಾಯಕ ವಿರಾಟ್‌ ಕೊಹ್ಲಿ ಜತೆ 197 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 20 ಆಕರ್ಷಕ ಬೌಂಡರಿ ಬಾರಿಸಿದ ಅವರು 3 ಸಿಕ್ಸರ್‌ ಸಿಡಿಸಿದ್ದರು. ಧವನ್‌ಗೆ ಉತ್ತಮ ಬೆಂಬಲ ನೀಡಿದ ಕೊಹ್ಲಿ 70 ಎಸೆತಗಳಿಂದ 10 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 82 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಗೆಲುವಿನಿಂದ  ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಜೇಯ ಶತಕ ಸಿಡಿಸಿದ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಪಿನ್‌ ಸುಳಿಗೆ ಸಿಲುಕಿದ ಲಂಕಾ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾಕ್ಕೆ ನಿರೋಷನ್‌ ಡಿಕ್ವೆಲ್ಲ-ದನುಷ್ಕ ಗುಣತಿಲಕ ಉತ್ತಮ ಆರಂಭ ಒದಗಿಸಿದ್ದರು. ಭುವನೇಶ್ವರ್‌ ಕುಮಾರ್‌-ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ದಾಳಿಯನ್ನು ಇವರಿಬ್ಬರೂ ಯಾವುದೇ ತಾಪತ್ರಯವಿಲ್ಲದೆ ನಿಭಾಯಿಸಿದ್ದರು. ಮೊದಲ 10 ಓವರ್‌ಗಳಲ್ಲಿ 55 ರನ್‌ ಒಟ್ಟುಗೂಡಿತು. ಭರ್ತಿ 14 ಓವರ್‌ಗಳ ಬ್ಯಾಟಿಂಗ್‌ ನಡೆಸಿದ ಈ ಜೋಡಿ 74 ರನ್‌ ಪೇರಿಸಿತು. 139 ರನ್‌ ತನಕ ಲಂಕಾ ಒಂದೇ ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆತಿಥೇಯರ ಮೊತ್ತ 270-280ರ ತನಕ ಬೆಳೆಯುವ ಎಲ್ಲ ಸೂಚನೆ ಇತ್ತು. ಟೆಸ್ಟ್‌ ಸರಣಿಯ ಹೀನಾಯ ಪ್ರದರ್ಶನವನ್ನು ಮರೆಸುವ ನಿಟ್ಟಿನಲ್ಲಿ ಆತಿಥೇಯರ ಹೋರಾಟ ಸಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತ ಯಾವಾಗ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿತೋ, ಲಂಕಾ ವಿಲವಿಲ ಒದ್ದಾಡತೊಡಗಿತು. 77 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿಸಿಕೊಂಡು ನಾಟಕೀಯ ಕುಸಿತವೊಂದಕ್ಕೆ ಸಾಕ್ಷಿಯಾಯಿತು. ಕೇವಲ 216 ರನ್ನಿಗೆ ಶ್ರೀಲಂಕಾ ಇನ್ನಿಂಗ್ಸ್‌ ಮುಗಿದಿತ್ತು!

ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ 34ಕ್ಕೆ 3 ವಿಕೆಟ್‌ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. ಪಟೇಲ್‌ ಕಳೆದ ಅಕ್ಟೋಬರ್‌ ಬಳಿಕ ಮೊದಲ ಏಕದಿನ ಪಂದ್ಯವಾಡಲು ಇಳಿದಿದ್ದರು. ಪಾರ್ಟ್‌ಟೈಮ್‌ ಬೌಲರ್‌ ಕೇದಾರ್‌ ಜಾಧವ್‌ 26ಕ್ಕೆ 2, ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ 60 ರನ್ನಿಗೆ 2 ವಿಕೆಟ್‌ ಕಿತ್ತರು. ಬುಮ್ರಾ ಸಾಧನೆ 22ಕ್ಕೆ 2 ವಿಕೆಟ್‌. ಗುಣತಿಲಕ ಅವರನ್ನು ರಾಹುಲ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ಚಾಹಲ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಭುವಿ-ಪಾಂಡ್ಯ ಜೋಡಿಗೆ ವಿಕೆಟ್‌ ಲಭಿಸಲಿಲ್ಲ.

ಶ್ರೀಲಂಕಾ ಸರದಿಯಲ್ಲಿ ಮೊದಲ 5 ಮಂದಿ ಎರಡಂಕೆಯ ಮೊತ್ತ ದಾಖಲಿಸಿದರೆ, ಉಳಿದ 6 ಮಂದಿ ಒಂದಂಕೆಯ ಗಡಿ ದಾಟಲಿಲ್ಲ. 64 ರನ್‌ ಮಾಡಿದ ಆರಂಭಕಾರ ಡಿಕ್ವೆಲ್ಲ ಅವರದು ಸರ್ವಾಧಿಕ ಗಳಿಕೆ. ಇದು ಅವರ 5ನೇ ಅರ್ಧ ಶತಕ. 74 ಎಸೆತ ಎದುರಿಸಿದ ಡಿಕ್ವೆಲ್ಲ 8 ಬೌಂಡರಿ ಬಾರಿಸಿದರು. ಇವರ ಜತೆಗಾರ ಗುಣತಿಲಕ 44 ಎಸೆತಗಳಿಂದ 35 ರನ್‌ (4 ಬೌಂಡರಿ) ಮಾಡಿದರೆ, ಮೆಂಡಿಸ್‌ ಮತ್ತು ಮ್ಯಾಥ್ಯೂಸ್‌ ತಲಾ 36 ರನ್‌ ಹೊಡೆದರು. ಇವರಲ್ಲಿ ಮ್ಯಾಥ್ಯೂಸ್‌ ಅವರದು ಅಜೇಯ ಬ್ಯಾಟಿಂಗ್‌. ಆದರೆ ಇವರಿಗೆ ಇನ್ನೊಂದು ತುದಿಯಿಂದ ಯಾರೂ ಬೆಂಬಲ ನೀಡಲಿಲ್ಲ. ಕಪುಗೆಡರ (1), ಪೆರೆರ (0) ಬೇಗನೇ ಪೆವಿಲಿಯನ್‌ ಸೇರಿದ್ದು ಲಂಕೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

Advertisement

ಸ್ಕೋರ್‌ಪಟ್ಟಿ
ಶ್ರೀಲಂಕಾ
ನಿರೋಷನ್‌ ಡಿಕ್ವೆಲ್ಲ    ಎಲ್‌ಬಿಡಬ್ಲ್ಯು ಜಾಧವ್‌    64
ದನುಷ್ಕ ಗುಣತಿಲಕ    ಸಿ ರಾಹುಲ್‌ ಬಿ ಚಾಹಲ್‌    35
ಕುಸಲ್‌ ಮೆಂಡಿಸ್‌    ಬಿ ಪಟೇಲ್‌    36
ಉಪುಲ್‌ ತರಂಗ    ಸಿ ಧವನ್‌ ಬಿ ಜಾಧವ್‌    13
ಏಂಜೆಲೊ ಮ್ಯಾಥ್ಯೂಸ್‌    ಔಟಾಗದೆ    36
ಚಾಮರ ಕಪುಗೆಡರ    ರನೌಟ್‌    1
ವನಿಂದು ಹಸರಂಗ    ಸಿ ಜಾಧವ್‌ ಬಿ ಪಟೇಲ್‌    2
ತಿಸರ ಪೆರೆರ    ಬಿ ಬುಮ್ರಾ    0
ಲಕ್ಷಣ ಸಂದಕನ್‌    ಎಲ್‌ಬಿಡಬ್ಲ್ಯು ಪಟೇಲ್‌    5
ಲಸಿತ ಮಾಲಿಂಗ    ಸ್ಟಂಪ್ಡ್ ಧೋನಿ ಬಿ ಚಾಹಲ್‌    8
ವಿಶ್ವ ಫೆರ್ನಾಂಡೊ    ಬಿ ಬುಮ್ರಾ    0

ಇತರ        16
ಒಟ್ಟು  (43.2 ಓವರ್‌ಗಳಲ್ಲಿ ಆಲೌಟ್‌)    216
ವಿಕೆಟ್‌ ಪತನ: 1-74, 2-139, 3-150, 4-166, 5-169, 6-176, 7-178, 8-187, 9-209.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6-0-33-0
ಹಾರ್ದಿಕ್‌ ಪಾಂಡ್ಯ        6-0-35-0
ಜಸ್‌ಪ್ರೀತ್‌ ಬುಮ್ರಾ        6.2-0-22-2
ಯಜುವೇಂದ್ರ ಚಾಹಲ್‌        10-0-60-2
ಕೇದಾರ್‌ ಜಾಧವ್‌        5-0-26-2
ಅಕ್ಷರ್‌ ಪಟೇಲ್‌        10-0-34-3

ಭಾರತ
ರೋಹಿತ್‌ ಶರ್ಮ    ರನೌಟ್‌    4
ಶಿಖರ್‌ ಧವನ್‌    ಔಟಾಗದೆ    132
ವಿರಾಟ್‌ ಕೊಹ್ಲಿ    ಔಟಾಗದೆ    82

ಇತರ        2
ಒಟ್ಟು  (28.5 ಓವರ್‌ಗಳಲ್ಲಿ 1 ವಿಕೆಟಿಗೆ)    220
ವಿಕೆಟ್‌ ಪತನ: 1-23

ಬೌಲಿಂಗ್‌:

ಲಸಿತ ಮಾಲಿಂಗ        8-0-52-0
ವಿಶ್ವ ಫೆರ್ನಾಂಡೊ        6-0-43-0
ಏಂಜೆಲೊ ಮ್ಯಾಥ್ಯೂಸ್‌        2-0-9-0
ತಿಸರ ಪೆರೆರ        2-0-18-0
ಲಕ್ಷಣ ಸಂದಕನ್‌        6-0-63-0
ವನಿಂದು ಹಸರಂಗ        4.5-0-36-0

ಪಂದ್ಯಶ್ರೇಷ್ಠ: ಶಿಖರ್‌ ಧವನ್‌ 

ದ್ವಿತೀಯ ಏಕದಿನ  ಆ. 24: ಪಲ್ಲೆಕಿಲೆ

 

Advertisement

Udayavani is now on Telegram. Click here to join our channel and stay updated with the latest news.

Next