Advertisement
ಹೌದು, ಕೋವಿಡ್ ವೈರಸ್, ರೂಪಾಂತರ ಕೋವಿಡ್ ಆತಂಕದ ಮಧ್ಯೆಯೂ ಬರೋಬ್ಬರಿ 9 ತಿಂಗಳು, 24 ದಿನಗಳ ಬಳಿಕ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಆರಂಭಗೊಂಡಿವೆ. ಶಾಲೆಯ ಮುಖ್ಯ ಗೇಟ್‌ಗೆ ಟೆಂಗಿನ ತಳಿರು-ತೋರಣ ಕಟ್ಟಿ, ವಿಶೇಷ ಅಲಂಕಾರ ಮಾಡಲಾಗಿತ್ತು.
Related Articles
Advertisement
ಸೋಮವಾರದಿಂದ ಮೊದಲ ದಿನ 6ನೇ ತರಗತಿ ಮಕ್ಕಳಿಗೆ ಪಾಠ ಮಾಡಿದರೆ, ಮರುದಿನ 7, ಅದರ ಮರುದಿನ 8ನೇ ತರಗತಿ ನಡೆಯಲಿವೆ. ಮೂರು ತರಗತಿ ಮಕ್ಕಳಿಗೆ ಎರಡು ದಿನ ರಜೆ ನೀಡಲಿದ್ದು, ಆ ಅವಧಿಯಲ್ಲಿ ಅವರಿಗೆ ಹೋಂ ವರ್ಕ್ ನೀಡುವಂತೆ ಸರ್ಕಾರ ಕೂಡ ನಿರ್ದೇಶನ ನೀಡಿದೆ. ಇದೇ ಮಾರ್ಗಸೂಚಿಯಡಿ ವಿದ್ಯಾಗಮ-2ನೇ ಯೋಜನೆಯಡಿ ತರಗತಿ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ.
ಖುಷಿಯಾದ ಮಕ್ಕಳು: ಬರೋಬ್ಬರಿ 9ತಿಂಗಳು, 24 ದಿನಗಳಿಂದ ರಜೆಯ ಲ್ಲಿದ್ದ ಮಕ್ಕಳು ದೀರ್ಘ ಕಾಲದ ಬಳಿಕ ಶಾಲಾ ಆವರಣಕ್ಕೆ ಬಂದರು. ಗ್ರಾಮೀಣ ಭಾಗದಲ್ಲಂತೂ ನಮ್ಮ ಶಾಲೆ ಶುರುವಾಯ್ತು ಎಂದು ಓಡೋಡಿ ಮಕ್ಕಳು ಶಾಲೆಯತ್ತ ಬರುತ್ತಿದ್ದರು.ಪ್ರತಿಯೊಬ್ಬ ಮಕ್ಕಳಿಂದಲೂ ಪಾಲಕರ ಒಪ್ಪಿಗೆ ಪಡೆಯುವುದು ಕಡ್ಡಾಯಗೊಳಿಸಲಾಗಿತ್ತು.ಹೀಗಾಗಿ ಮೊದಲ ದಿನ ಮಕ್ಕಳ ಜತೆಗೆ ಪಾಲಕರೂ ಶಾಲೆಗೆ ಬಂದು ಒಪ್ಪಿಗೆ ನೀಡಿದ್ದಾರೆ. ಇನ್ನೂ ಕೆಲವರು ಮೊದಲ ದಿನ ಎಷ್ಟು ಮಕ್ಕಳು ಬರುತ್ತಾರೆ, ಏನೇನು ಸಮಸ್ಯೆ ಆಗುತ್ತದೆ ನೋಡಿಕೊಂಡು ಸೋಮವಾರದಿಂದ ಕಳುಹಿಸಿದರಾಯ್ತು ಎಂದು ಮೊದಲ ದಿನ ಶಾಲೆಗೆ ಮಕ್ಕಳನ್ನು ಕಳುಹಿಸಿರಲಿಲ್ಲ.
ಜಿಲ್ಲೆಯಾದ್ಯಂತ 6ರಿಂದ 10ನೇ ತರಗತಿ ಶಾಲೆಗಳು ಆರಂಭಗೊಂಡಿವೆ. ಮೊದಲ ದಿನ ಎಸ್ಸೆಸ್ಸೆಲ್ಸಿಯ ಶೇ.50 ಮಕ್ಕಳು ಬಂದರೆ, 9ನೇ ತರಗತಿಯ ಶೇ.60 ಮಕ್ಕಳು ಬಂದಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಮಾರ್ಗಸೂಚಿ ಪಾಲನೆಯೊಂದಿಗೆ ತರಗತಿ ಆರಂಭಿಸಲಾಗಿದೆ. –ಶ್ರೀಶೈಲ ಎಸ್. ಬಿರಾದಾರ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
ಶಾಲಿಗಿ ಬರ್ಲಾದೆ ಬಹಳ ದಿನಾ ಆಗಿತ್ತು. ಮನ್ಯಾಗ್ ಕುಂತು ಓದತಿದ್ವಿ. ಏನರೇ ತಿಳಿಲಿಲ್ಲ ಅಂದ್ರ ನಮ್ಮ ಸರ್ಗೆ ಫೋನ್ ಮಾಡಿ ಕೇಳತಿದ್ವಿ. ಇಂದು ಮತ್ ಶಾಲಿ ಚಾಲೂ ಆಗೈತಿ. ಖುಷಿಯಾಗಿ ಬಂದಿದ್ದೇವೆ. ಈ ವರ್ಷನಾನು 10ನೇ ತರಗತಿ ಇದ್ದು, ಫಸ್ಟ್ ಕ್ಲಾಸ್ ನಾಗ್ ಪಾಸ್ ಆಗ್ಬೇಕು ಅಂತ ಮನ್ಯಾಗ್ ಓದೀನಿ. ಗಣಿತ, ಇಂಗ್ಲಿಷ್ ಬಗ್ಗೆ ಸರ್‌ಗೆ ಬಾಳ್ ಸಾರಿ ಫೋನ್ ಮಾಡತಿದ್ವಿ. ಈಗ ಶಾಲಿ ಚಾಲೂ ಆಗಿದ್ದು, ಖುಷಿ ಆಗೈತಿ. –ಕಸ್ತೂರಿ ಮುದಬಸಪ್ಪಗೋಳ, 10ನೇ ತರಗತಿ ವಿದ್ಯಾರ್ಥಿನಿ
ವಿದ್ಯಾಗಮ-2 ಯೋಜನೆಯಡಿ ಶಾಲೆ ಆರಂಭಗೊಂಡಿದ್ದು, 9 ಮತ್ತು 10ನೇ ತರಗತಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. 10ನೇ ತರಗತಿ ಮಕ್ಕಳಿಗೆ ಒಂದು ಕೊಠಡಿಯಲ್ಲಿ 15 ಮಕ್ಕಳನ್ನು ಜಿಗ್‌ಜ್ಯಾಗ್ ಮಾದರಿಯಲ್ಲಿ ಕೂಡಿಸಿದ್ದು, 9ನೇ ತರಗತಿ ಮಕ್ಕಳಿಗೆ ಶಾಲಾ ಆವರಣದ ಗಿಡದ ಕೆಳಗೆ ಸಾಮಾಜಿಕ ಅಂತರದೊಂದಿಗೆ ತರಗತಿ ನಡೆಸಲಾಗಿದೆ. ಶಾಲೆಗೆ ಬರುವ ಮಗುವಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್ ನೀಡಿ ಬಳಿಕ ಹೂ ನೀಡಿ ಸ್ವಾಗತಿಸಲಾಯಿತು. ಈ ಪ್ರಕ್ರಿಯೆಗೆ ಮಕ್ಕಳು, ಪಾಲಕರು ಖುಷಿಪಟ್ಟರು. – ಎಸ್.ಎನ್. ಘಂಟಿ, ಮುಖ್ಯೋಪಾಧ್ಯಾಯ, ಕರ್ನಾಟಕ ಪಬ್ಲಿಕ್ ಸ್ಕೂಲ್, ಮುಗಳೊಳ್ಳಿ
-ಶ್ರೀಶೈಲ ಕೆ. ಬಿರಾದಾರ