ಹುಬ್ಬಳ್ಳಿ: ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ಪಶ್ಚಿಮ ಘಟ್ಟ ಉಳಿಸಿ ಸಮಾವೇಶ ಜು.19ರಂದು ಉತ್ತರಕನ್ನಡ ಜಿಲ್ಲೆ ಶಿರಸಿ ಪಟ್ಟಣದ ಯೋಗ ಮಂದಿರದಲ್ಲಿ ನಡೆಯಲಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಕಳೆದ ಮೂರು ದಶಕದಲ್ಲಿ ಪಶ್ಚಿಮ ಘಟ್ಟ ಸಾಕಷ್ಟು ನಾಶವಾಗಿದೆ.
ಅಭಿವೃದ್ಧಿ ಯೋಜನೆಗೆ ಮರಗಳ ಮಾರಣಹೋಮ ಹೆಚ್ಚಾಗುತ್ತಿದ್ದು,ಪರ್ಯಾಯವಾಗಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಆಗುತ್ತಿಲ್ಲ ಎಂದರು. ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಯೋಜನೆಗೆ ಮುಂದಾಗಿರುವುದು ನಿಸರ್ಗದ ವಿರುದ್ಧದ ಸೆಣಸಾಟವಾಗಿದೆ. ಪರಿಸರ ಹಾಗೂ ಜೀವಿಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದ್ದು, ಪಶ್ಚಿಮ ಘಟ್ಟ ಉಳಿಸುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಪಶ್ಚಿಮ ಘಟ್ಟ ಉಳಿಸಿ ಆಂದೋಲನಕ್ಕೆ ಅಧ್ಯಾತ್ಮ ಬಲ ನೀಡಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಮಾವೇಶದಲ್ಲಿ ಪಾಲ್ಗೊಂಡು ಚಳವಳಿ ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವರು.
ಪಶ್ಚಿಮಘಟ್ಟದ ನಾಶದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಚಳವಳಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ. ಮುಂದಿನ ಹೋರಾಟ ಕುರಿತು ಕಾರ್ಯಕ್ರಮ ರೂಪಿಸಲಾಗುವುದು ಎಂದರು.