ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನಾದ ಯೂಸೂಫ್ ಮೆಮನ್ ಶುಕ್ರವಾರ ಮಹಾರಾಷ್ಟ್ರದ ನಾಸಿಕ್ ಜೈಲಿನಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಈತ ಮುಂಬೈ ಸ್ಫೋಟದ ರೂವಾರಿಗಳಲ್ಲಿ ಒಬ್ಬನಾದ ಟೈಗರ್ ಮೆಮನ್ ಸಹೋದರ.
ಈತನ ಸಾವು ಹೇಗೆ ಸಂಭವಿಸಿತು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಾಥಮಿಕ ವರದಿ ಪ್ರಕಾರ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೂಸೂಫ್ ಸಾವಿಗೀಡಾಗಿರುವುದಾಗಿ ತಿಳಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೂಸೂಫ್ ಮೆಮನ್ ಸಾವನ್ನು ನಾಸಿಕ್ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ ಪಾಟೀಲ್ ಖಚಿತಪಡಿಸಿದ್ದಾರೆ. ಯೂಸೂಫ್ ಹಿರಿಯ ಸಹೋದರ ಯಾಕೂಬ್ ಮೆಮನ್ ನನ್ನು 2015ರಲ್ಲಿ ನಾಗ್ಪುರ್ ಜೈಲಿನಲ್ಲಿ ನೇಣಿಗೆ ಏರಿಸಲಾಗಿತ್ತು.
ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಟೈಗರ್ ಮೆಮನ್ ಈ ಸರಣಿ ಬಾಂಬ್ ಸ್ಫೋಟದ ರೂವಾರಿಗಳಾಗಿದ್ದಾರೆ. ಯೂಸೂಫ್ ಮುಂಬೈನಲ್ಲಿನ ಆತನ ಅಲ್ ಹುಸೈನಿ ಗ್ಯಾರೇಜ್ ಹಾಗೂ ಫ್ಲ್ಯಾಟ್ ಅನ್ನು ಉಗ್ರರ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಎಂದು ವರದಿ ತಿಳಿಸಿದೆ.
ಭಯೋತ್ಪಾದಕ ನಿಗ್ರಹ ವಿಶೇಷ ಟಾಡಾ ಕೋರ್ಟ್ ಯೂಸೂಫ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 1993ರ ಮಾರ್ಚ್ 12ರಂದು ಸಂಭವಿಸಿದ್ದ ಈ ಸರಣಿ ಬಾಂಬ್ ಸ್ಫೋಟದಲ್ಲಿ 250 ಮಂದಿ ಸಾವನ್ನಪ್ಪಿದ್ದರು. ಹಲವಾರು ಜನರು ಗಾಯಗೊಂಡಿದ್ದರು.