ನವದೆಹಲಿ: ಅಕ್ರಮ ಹಣಕಾಸು ಪ್ರಕರಣದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯ ವಾದ, ಪ್ರತಿವಾದ ಆಲಿಸಿದ ರೋಸ್ ಅವೆನ್ಯೂ ಕೋರ್ಟ್ ನ ನ್ಯಾಯಾಧೀಶರಾದ ಕುಹರ್ ಅವರು ಆದೇಶವನ್ನು ಕಾಯ್ದಿರಿಸಿ, ಭೋಜನ ವಿರಾಮದ ನಂತರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.
198ಗಂಟೆ ವಿಚಾರಣೆ ನಡೆಸಿದ್ದಾರೆ; ಡಿಕೆಶಿ ಪರ ವಕೀಲ ಸಿಂಘ್ವಿ ವಾದ
ಜಾರಿ ನಿರ್ದೇಶನಾಲಯದ ವಾದ ಪೂರ್ವಾಗ್ರಹಪೀಡಿತವಾಗಿದೆ ಎಂದು ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಪ್ರತಿವಾದ ಮಂಡಿಸಿದರು. ಕಳೆದ 22 ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಈವರೆಗೆ 198ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ನಾಲ್ಕು ದಿನ ಮಾತ್ರ ಆಸ್ಪತ್ರೆಯಲ್ಲಿದ್ದರು. ಪ್ರತಿದಿನ 9ಗಂಟೆಗಳ ಕಾಲ ವಿಚಾರಣೆ ಅಮಾನವೀಯ. ಕೋರ್ಟ್ ಎದುರು ದೊಡ್ಡ, ದೊಡ್ಡ ಮೊತ್ತ ಉಲ್ಲೇಖಿಸಲಾಗುತ್ತಿದೆ. ಡಿಕೆ ಶಿವಕುಮಾರ್ ವಿಮಾನದಲ್ಲಿ ಪರಾರಿಯಾಗುವ ವ್ಯಕ್ತಿಯಲ್ಲ ಎಂದು ಸಿಂಘ್ವಿ ವಾದ ಮಂಡಿಸಿದರು.
ಇಸಿಐಆರ್ ಕಾಫಿಗೂ ನಾವು ಭಿಕ್ಷೆ ಬೇಡುವ ಸ್ಥಿತಿ ಇದೆ. ಇ.ಡಿ ಹೇಳಿಕೆಗಳನ್ನು ತಿರುಚುತ್ತಿದೆ. ಯಾವುದು ಷಡ್ಯಂತ್ರ, ಯಾವುದು ಆಳವಾದ ಷಡ್ಯಂತ್ರ ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ಇಲ್ಲಿ ನಾಯಿಯನ್ನು ಬಾಲವೇ ಅಲ್ಲಾಡಿಸುತ್ತಿದೆ. ಭಯೋತ್ಪಾದನೆ, ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಬಹುದು. ಇಷ್ಟೆಲ್ಲಾ ವಿಚಾರಣೆ ನಡೆಸಿದರೂ ದಾಖಲೆ ಕಲೆಹಾಕುವಲ್ಲಿ ಇ.ಡಿ ವಿಫಲವಾಗಿದೆ.
ಇದು ಪ್ರಜಾಪ್ರಭುತ್ವ ಭಾಗವೇ ಎಂಬ ಅನುಮಾನ ಮೂಡಿಸುತ್ತಿದೆ. ನಮ್ಮ ಸ್ನೇಹಿತರು ಗಾಳಿಯಲ್ಲಿ ಹಣ್ಣು ಹಿಡಿಯುತ್ತಿದ್ದಾರೆ. ಎರಡು ವರ್ಷದ ಹಿಂದೆ ಆದಾಯ ತೆರಿಗೆ ದಾಳಿಯಾಗಿತ್ತು. 2018ರ ಸೆಪ್ಟೆಂಬರ್ ನಲ್ಲಿ ಇ.ಡಿ ಕೇಸು ದಾಖಲಿಸಿತ್ತು. ಕಾನೂನು ಬದಲಾವಣೆ ಮಾಡಿದ್ದು ಪೂರ್ವಾನ್ವಯವಾಗಲ್ಲ. ಅಪರಾಧ ನಡೆದಾಗ ಇದ್ದ ಕಾಯ್ದೆಯನ್ನು ಅನ್ವಯಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದು ಸಿಂಘ್ವಿ ವಾದ ಮಂಡಿಸಿದರು.
ಹಫ್ತಾ ಲಂಚ ಇದ್ದಂತೆ, ಇದು ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಜೇಬುಗಳ್ಳರನ್ನು ಹವಾಲಾ ಸಾಲಿಗೆ ಸೇರಿಸುವ ಪ್ರಯತ್ನ ನಡೆದಿದೆ. ಪೂರ್ವಾಗ್ರಹ ಪೀಡಿತರಾಗಿ ಇಲ್ಲ, ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಿಸೆಗಳ್ಳತನವನ್ನು ಅನುಸೂಚಿತ ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಘೋಷಿಸಿದ ಆಸ್ತಿ ಹವಾಲಾ ಹೇಗಾಗುತ್ತದೆ ಎಂದು ಸಿಂಘ್ವಿ ಪ್ರಶ್ನಿಸಿದರು.
ಮಾಡದಿರುವ ತಪ್ಪನ್ನು ಪತ್ತೆ ಮಾಡಲೇಬೇಕೆಂದು ಇ.ಡಿ ಹಠಕ್ಕೆ ಬಿದ್ದಿದೆ. ಡಿಕೆಶಿ ಯಾವುದೇ ದಾಖಲೆ ನಕಲಿ ಮಾಡಿಲ್ಲ. ದೇಶದ ಆರ್ಥಿಕ ಭದ್ರತೆಗೆ ಯಾವುದೇ ಕಂಟಕವಿಲ್ಲ. ಇದು ಅಪರಾಧ ಸಾಬೀತು ಆಗದ ಪ್ರಕರಣ. ಇದು ಆರೋಪ ಸಾಬೀತಾಗುವ ಪ್ರಕರಣವೇ ಅಲ್ಲ. ಐಟಿ ಕಾಯ್ದೆಯಡಿ ಮಾತ್ರ ಡಿಕೆಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕನಿಷ್ಠ ಜಾಮೀನು ಪಡೆಯೋ ಅರ್ಹತೆ ಇಲ್ಲವೇ ಎಂದು ಸಿಂಘ್ವಿ ಪ್ರಶ್ನಿಸಿದರು.
ಕಲ್ಲಿನಿಂದ ಕೋಟೆ ಕಟ್ಟುತ್ತಾರೆ, ನೋಟಿನಿಂದ ಅಲ್ಲ: ನಟರಾಜ್
ಇಡಿ ವಶದಲ್ಲಿದ್ದಾಗ ಡಿಕೆಶಿ ಸಮರ್ಪಕ ಉತ್ತರ ಕೊಟ್ಟಿಲ್ಲ. ಇದು ಗಂಭೀರ ಆರ್ಥಿಕ ಅಪರಾಧ. ಪೂರ್ವ ಯೋಜಿತವಾಗಿಯೇ ಆರ್ಥಿಕ ಅಪರಾಧ ಮಾಡಿರುತ್ತಾರೆ. ಡಿಕೆಶಿ ಬಂಧನ ಯಾವುದೇ ಪರಿಣಾಮ ಬೀರಿಲ್ಲ ಅಂತ ಭಾವಿಸುತ್ತೇನೆ. ಡಿಕೆಶಿ ಆದಾಯದ ಮೂಲ ತಿಳಿಸಿಲ್ಲ. ಕೋಟೆಗಳನ್ನು ಕಲ್ಲಿನಿಂದ ಕಟ್ಟಲಾಗುತ್ತೆ, ನೋಟಿನಿಂದ ಅಲ್ಲ. ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಗೆ ಜಾಮೀನು ನೀಡಬಾರದು ಎಂದು ಎಎಸ್ ಜಿ ನಟರಾಜ್ ವಾದ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.