ಉಡುಪಿ: ಜಿಲ್ಲೆಯಲ್ಲಿ ಶನಿವಾರ 19 ಜನರಿಗೆ ಕೋವಿಡ್ -19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಕೋವಿಡ್ -19 ಸೋಂಕಿತರ ಸಂಖ್ಯೆ 1277ಕ್ಕೆ ಏರಿಕೆಯಾಗಿದೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಇಂದು ಜಿಲ್ಲೆಯಲ್ಲಿ 1047 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.
ಉಡುಪಿಯ ಪ್ರತಿಷ್ಠಿತ ಹೋಟೆಲ್ ಒಂದರ ಮಾಲಕರಿಗೆ ಕೋವಿಡ್ -19 ಪಾಸಿಟಿವ್ ದೃಢವಾಗಿದೆ. ಈ ಕಾರಣದಿಂದ ಹೋಟೆಲ್ ನ್ನು ಸೀಲ್ ಡೌನ್ ಮಾಡಲಾಗಿದೆ. ಅಂತೆಯೇ ಸೋಂಕು ಕಂಡುಬಂದ ಉಳಿದ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ, ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 17,545 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 14,556 ವರದಿಗಳು ನೆಗಟಿವ್ ಬಂದಿದೆ. ಉಳಿದಂತೆ 1277 ವರದಿಗಳು ಕೋವಿಡ್ ಪಾಸಿಟಿವ್ ಆಗಿದ್ದರೆ, 1712 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.
ಇದನ್ನೂ ಓದಿ: ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1277ಕ್ಕೆ ಏರಿಕೆಯಾಗಿದೆ. ಅದರಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. 1114 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 160 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.