ಬೀದರ: ಇಲ್ಲಿಯ ಜನ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು 2021-22ನೇ ಸಾಲಿನಲ್ಲಿ ಒಟ್ಟು 19.70 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಹಕಾರಿಯ ನಾಲ್ಕನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಲಾಭದಲ್ಲಿ ಸದಸ್ಯರಿಗೆ ಶೇ. 10ರಷ್ಟು ಪಾಲು ಕೊಡಲಾಗುವುದು. ಸದಸ್ಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ಕಲ್ಪಿಸುವ ದಿಸೆಯಲ್ಲಿ ಬರುವ ದಿನಗಳಲ್ಲಿ “ಜನ ಸಮೃದ್ಧಿ ಪರಿವಾರ’ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ ಎಂದು ಹೇಳಿದರು.
ಸಹಕಾರಿಯು 3.01 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಠೇವಣಿ ಮೊತ್ತ 1.91 ಕೋಟಿ ರೂ. ಹಾಗೂ ಸಾಲ ಮತ್ತು ಮುಂಗಡಗಳ ಮೊತ್ತ 2.24 ಕೋಟಿ ರೂ. ಆಗಿದೆ. ಉತ್ತಮ ಸೇವೆ ಹಾಗೂ ಅತ್ಯಾಧುನಿಕ ಸೌಲಭ್ಯಗಳ ಕಾರಣ ಸಹಕಾರಿ ಗ್ರಾಹಕರ ವಿಶ್ವಾಸ ಗಳಿಸಿದೆ. ನಿರಂತರ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾರದರ್ಶಕ ಆಡಳಿತ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಹಕಾರಿ ಅಲ್ಪಾವ ಧಿಯಲ್ಲೇ ಪ್ರಗತಿ ಸಾಧಿಸಿದೆ. ವಿವಿಧ ಯೋಜನೆಗಳ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಉತ್ತಮ ಸೇವೆಗಾಗಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಕುಮಾರ ಹಲಬುರ್ಗೆ, ಪಿಗ್ಮಿ ಏಜೆಂಟರಾದ ಬಸವರಾಜ, ಅಶೋಕ ಹಾಗೂ ಆನಂದ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರತಿಕಾಂತ ಸ್ವಾಮಿ ಮಹಾಸಭೆ ಉದ್ಘಾಟಿಸಿದರು. ಶಿವಕುಮಾರ ಪಾಟೀಲ ಗುಮ್ಮೆ ಸ್ವಾಗತಿಸಿದರು. ಸೂರ್ಯಕಾಂತ ರಾಮಶೆಟ್ಟಿ ನಿರೂಪಿಸಿದರು. ಮಾಣಿಕ ಕರ್ಪೂರ ವಂದಿಸಿದರು.
ಸಹಕಾರಿ ಉಪಾಧ್ಯಕ್ಷ ಶಿವಕುಮಾರ ಕೆ. ಪಾಟೀಲ, ನಿರ್ದೇಶಕರಾದ ಸಂತೋಷಕುಮಾರ ಕೆ. ಪಾಟೀಲ, ಬಸವರಾಜ ದುಕಾನದಾರ್, ರಮೇಶ ರಂಜೇರಿ, ರಾಜಕುಮಾರ ಸೋನಾಳೆ, ಅಶೋಕ ಗಂಧೆ, ಮಾಣಿಕಪ್ಪ ಕರ್ಪೂರ, ಪಾಂಡುರಂಗ ಪಂಚಾಳ, ದಿಲೀಪ ಸಜ್ಜನಶೆಟ್ಟಿ, ಕೀರ್ತಿ ಎಸ್. ರಾಮಶೆಟ್ಟಿ, ಪರಮೇಶ್ವರ ಕೋರಿ ಇದ್ದರು.