Advertisement

18ರಿಂದ 20ನೇ ಕಲ್ಯಾಣ ಪರ್ವ ಉತ್ಸವ

04:02 PM Sep 30, 2021 | Team Udayavani |

ಬೀದರ: ಬಸವಣ್ಣನವರ ಕಾರ್ಯ ಕ್ಷೇತ್ರದ ಬಸವಕಲ್ಯಾಣದಲ್ಲಿ ಅ.18ರಿಂದ ಮೂರು ದಿನಗಳ ಕಾಲ ಬಸವ ಧರ್ಮ ಪೀಠದಿಂದ 20ನೇ ಕಲ್ಯಾಣ ಪರ್ವ ಉತ್ಸವ ಆಯೋಜಿಸಲಾಗಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪೀಠಾಧ್ಯಕ್ಷರಾದ ಡಾ| ಮಾತೆ ಗಂಗಾದೇವಿ ಮನವಿ ಮಾಡಿದ್ದಾರೆ.

Advertisement

ಬಸವಕಲ್ಯಾಣ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕೆಂಬ ಆಶಯದೊಂದಿಗೆ ಲಿಂ| ಮಾತೆ ಮಹಾದೇವಿಯವರು ಕಲ್ಯಾಣ ಪರ್ವ ಆರಂಭಿಸಿ, 17 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಪೂಜ್ಯರು ಲಿಂಗೈಕ್ಯರಾದ ನಂತರ 3ನೇ ಪರ್ವ ಇದಾಗಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆ ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಅರ್ಥಪೂರ್ಣವಾಗಿ ನಡೆಯಲಿದ್ದು, ಕರ್ನಾಟಕ ಮಾತ್ರವಲ್ಲ ನೆರೆ ರಾಜ್ಯಗಳ ಸಾವಿರಾರು ಬಸವಾನುಯಾಯಿಗಳು
ಪಾಲ್ಗೊಳ್ಳಲಿದ್ದಾರೆ. ಭಕ್ತರಿಗಾಗಿ ಅಗತ್ಯ ವಸತಿ, ಪ್ರಸಾದ ವ್ಯವಸ್ಥೆಯನ್ನು ಉತ್ಸವ ಸಮಿತಿ ಮಾಡಲಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅ.18ರಂದು ಬೆಳಿಗ್ಗೆ 10.30ಕ್ಕೆ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಕಲ್ಯಾಣ ಪರ್ವಕ್ಕೆ ಚಾಲನೆ ನೀಡುವರು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ 6.30ಕ್ಕೆ ಧರ್ಮ ಚಿಂತನೆ ಗೋಷ್ಠಿ ಜರುಗಲಿವೆ. 19ರಂದು ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, ನಂತರ ಶರಣ ವಂಚನೆ ಹಾಗೂ ಶರಣರಿಗೆ ಶರಣಾರ್ಥಿ ಕಾರ್ಯಕ್ರಮ, ಸಾಯಂಕಾಲ “ಲಿಂಗಾಯತ ಧರ್ಮದ ಮಾನ್ಯತೆ’ ಕುರಿತಂತೆ ಚಿಂತನಗೋಷ್ಠಿ ನಡೆಯವುದು.

20ರಂದು ಬೆ.10ಕ್ಕೆ ಪರುಷ ಕಟ್ಟೆಯಿಂದ ಬಸವ ಮಹಾಮನೆವರೆಗೆ ಪಥ ಸಂಚಲನ, ತದ ನಂತರ ಅಲ್ಲಮಪ್ರಭು ಶೂನ್ಯ ಪೀಠದ ಪೀಠಾರೋಹಣ, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಲಿಂಗಾಯತ ಧರ್ಮಿಯರಿಗೆ ಕೂಡಲ ಸಂಗಮ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಎರಡು ಕಣ್ಣುಗಳಿದ್ದಂತೆ.

ಇವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಸಬೇಕಾದದ್ದು ನಮ್ಮೆಲ್ಲರ ಹೊಣೆ. ಜನ ಬದುಕಲಿ, ಜಗ ಬದುಕಲಿ ಎಂದು ವಚನ ಸಾಹಿತ್ಯವನ್ನು ನೀಡಿದ ಹಾಗೂ ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲು ನೀಡಿದ  ಅನುಭವ ಮಂಟಪ ಸ್ಥಾಪನೆಯಾದ ಬಸವಣ್ಣ ಕಾರ್ಯಕ್ಷೇತ್ರ ಬಸವಕಲ್ಯಾಣ. ಕಲ್ಯಾಣ ಕರ್ನಾಟಕ ಭಾಗದ ಜನರು ಸ್ವಯಂ ಪ್ರೇರಿತರಾಗಿ ಕಲ್ಯಾಣ ಪರ್ವಕ್ಕಾಗಿ ದುಡಿಯಲು ಮುಂದೆ ಬರಬೇಕು ಎಂದು ಕೋರಿದರು.

Advertisement

ಕಲ್ಯಾಣ ಪರ್ವದ ಯಶಸ್ವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಶಾಸಕ ಶರಣು ಸಲಗರ ಅಧ್ಯಕ್ಷರಾಗಿ, ಶಂಕರೆಪ್ಪ ಪಾಟೀಲ ಕಾರ್ಯಾಧ್ಯಕ್ಷ ಮತ್ತು ಹಾವಶೆಟ್ಟಿ ಪಾಟೀಲ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮಾತಾಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಕಲ್ಬುರ್ಗಿಯ ಪ್ರಭುಲಿಂಗ ಸ್ವಾಮೀಜಿ, ಬಸವ ದಳ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಶಿವರಾಜ ಪಾಟೀಲ  ಅತಿವಾಳ ಇದ್ದರು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಮಾನ್ಯತೆ ಸಿಗುವವರೆಗೆ ಹೋರಾಟ ನಿಲ್ಲುವುದೂ ಇಲ್ಲ. ಈ ಬಗ್ಗೆ ಅಪಪ್ರಚಾರಕ್ಕೆ ಯಾರು ಕಿವಿಗೊಡಬಾರದು. ಕೋವಿಡ್‌ ಹಿನ್ನೆಲೆ ಜಾಗೃತಿ ಕಾರ್ಯಕ್ರಮ ನಡೆದಿಲ್ಲ. ಶೀಘ್ರದಲ್ಲಿ ಹೈದ್ರಾಬಾದ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರ್ಯಾಲಿ ನಡೆಯಲಿದೆ. ಲಿಂಗಾಯತ ಧರ್ಮ ಎಂದು ಹೋದಾಗ ಮಾತ್ರ ಮಾನ್ಯತೆ ಸಿಗಲು ಸಾಧ್ಯ. ಹಾಗಾಗಿ ವೀರಶೈವರು ದೊಡ್ಡ ಮನಸ್ಸು ಮಾಡಬೇಕು. ಒಳ ಪಂಗಡಗಳಿಗೆ ಮೀಸಲಾತಿ ಹೋರಾಟ ಕೈ ಬಿಡಬೇಕು.
ಬಸವರಾಜ ಧನ್ನೂರ, ರಾಷ್ಟ್ರೀಯ ಅಧ್ಯಕ್ಷ, ಬಸವ ದಳ

Advertisement

Udayavani is now on Telegram. Click here to join our channel and stay updated with the latest news.

Next