Advertisement

ಇಂದು ಏಶ್ಯಾಡ್‌ ಉದ್ಘಾಟನೆ

06:00 AM Aug 18, 2018 | |

18ನೇ ಏಶ್ಯನ್‌ ಗೇಮ್ಸ್‌ ಉದ್ಘಾಟನಾ ಸಮಾರಂಭ ಇಂಡೋನೇಶ್ಯದ ಜಕಾರ್ತಾದಲ್ಲಿ  ಶನಿವಾರ ನಡೆಯಲಿದೆ. ಉದ್ಘಾಟನೆ ಮತ್ತು ಮುಕ್ತಾಯ ಸಮಾರಂಭಕ್ಕೆ ಜಕಾರ್ತಾದ ಗೆಲೊರಾ ಬಂಗ್‌ ಬಂಗ್‌ ಕಾನೊ ಮೈದಾನ ಆತಿಥ್ಯ ವಹಿಸಲಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದು ದೇಶದ ಎರಡು ನಗರಗಳಲ್ಲಿ (ಜಕಾರ್ತಾ, ಪಾಲೆಂಬಾಗ್‌) ಏಶ್ಯಾಡ್‌ ನಡೆಯುತ್ತಿದೆ. ಕೂಟದಲ್ಲಿ ಒಟ್ಟು 45 ರಾಷ್ಟ್ರಗಳ 11,000 ಆ್ಯತ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದಲೂ 572 ಮಂದಿ ಆ್ಯತ್ಲೀಟ್‌ಗಳು ಸೇರಿ ಒಟ್ಟು 804 ಮಂದಿಯ ಬೃಹತ್‌ ತಂಡ ಕೂಟದಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ 49 ಮಂದಿಯ ಖರ್ಚನ್ನು ಕೇಂದ್ರ ಸರಕಾರದ ಬದಲು ಆಯಾ ಒಕ್ಕೂಟಗಳೇ ಭರಿಸಲಿವೆ.

Advertisement

ಭಾರತದ ನಿರೀಕ್ಷೆಗಳೇನು?
ಈ ಬಾರಿ ಭಾರತೀಯ ತಂಡದಲ್ಲಿ 16 ವರ್ಷದ ಹರ್ಯಾಣ ಶೂಟರ್‌ ಮನು ಭಾಕರ್‌ರಿಂದ ಹಿಡಿದು ಹಿರಿಯ ಕುಸ್ತಿ ಸ್ಪರ್ಧಿ ಸುಶೀಲ್‌ಕುಮಾರ್‌ವರೆಗೆ ಇದ್ದಾರೆ. ಈಗಷ್ಟೇ 2 ವಿಶ್ವಕಪ್‌ ಚಿನ್ನ, ಕಾಮನ್ವೆಲ್ತ್‌ ಚಿನ್ನ ಗೆದ್ದು ಭಾಕರ್‌ ಪೂರ್ತಿ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಕುಸ್ತಿ ಸ್ಪರ್ಧಿಗಳಾದ ಸುಶೀಲ್‌ ಕುಮಾರ್‌, ಸಾಕ್ಷಿ ಮಲಿಕ್‌ ಸದ್ಯ ಫಾರ್ಮ್ ಇಲ್ಲದೇ ಒದ್ದಾಡುತ್ತಿದ್ದಾರೆ. ಪದಕ ಗೆದ್ದರೆ ಅವರಿಗಿದು ಬಿಡುಗಡೆ. ಇನ್ನು ಬಾಕ್ಸರ್‌ ವಿಕಾಸ್‌ ಕೃಷ್ಣನ್‌ ಯಾದವ್‌ ಮತ್ತೂಮ್ಮೆ ಚಿನ್ನ ಗೆಲ್ಲುವ ಯೋಚನೆಯಲ್ಲಿದ್ದಾರೆ. ಇವರ ಜೊತೆಗೆ ಗೌರವ್‌ ಸೋಲಂಕಿ, ಶಿವಥಾಪಾ ಇದ್ದಾರೆ.

ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌, ಎಚ್‌.ಎಸ್‌. ಪ್ರಣಯ್‌ ಅವರನ್ನು ಹೊಂದಿರುವ ಬ್ಯಾಡ್ಮಿಂಟನ್‌ ತಂಡ ಪ್ರತಿಭಾವಂತರಿಂದಲೇ ಕೂಡಿದೆ. ಆದರೆ ಇವರಲ್ಲಿ ಯಾರು ಪದಕ ಗೆಲ್ಲುತ್ತಾರೆ ಎನ್ನುವುದು ಕುತೂಹಲ. ಮುಖ್ಯವಾಗಿ ಸಿಂಧು ಫೈನಲ್‌ನಲ್ಲಿ ಸೋಲುವ ಚಾಳಿಯಿಂದ ಹೊರಬರಬೇಕು. ಜಾವೆಲಿನ್‌ನಲ್ಲಿ ನೀರಜ್‌ ಚೋಪ್ರಾ, ಸ್ಕ್ವಾಷ್‌ನಲ್ಲಿ ಮಣಿಕಾ ಬಾತ್ರಾ, ಶರತ್‌ ಕಮಲ್‌ ಅಚಂತ ಅವರ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಹಾಕಿ: ಚಿನ್ನ ಗೆದ್ದರೆ ಒಲಿಂಪಿಕ್ಸ್‌ಗೆ
ಭಾರತ ಪುರುಷರ ಹಾಕಿ ತಂಡ ಈ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆ ಹೊಂದಿದೆ. ಗೆದ್ದರೆ ಒಲಿಂಪಿಕ್ಸ್‌ಗೆ ನೇರಪ್ರವೇಶ ಸಿಗಲಿದೆ. ಸೋತರಂತೂ ವಿಪರೀತ ಮುಜುಗರಕ್ಕೊಳಗಾಗಲಿದೆ. ಇತ್ತೀಚೆಗಷ್ಟೇ ವಿಶ್ವಕಪ್‌ನಲ್ಲಿ ನಿರೀಕ್ಷೆ ಮೀರಿ ಕಳಪೆಯಾಗಿ ಸೋತ ಮಹಿಳಾ ತಂಡಕ್ಕೂ ಇಲ್ಲಿ ಗೆಲ್ಲಲೇಬೇಕಾದ ಅಗತ್ಯವಿದೆ.

ಚೋಪ್ರಾ ಧ್ವಜಧಾರಿ
ಉದ್ಘಾಟನಾ ಸಮಾರಂಭದಲ್ಲಿ ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಯುವ ಜಾವೆಲಿನ್‌ ಸ್ಪರ್ಧಿ ನೀರಜ್‌ ಚೋಪ್ರಾಗೆ ಒಲಿದಿದೆ. ಅವರು ರಾಷ್ಟ್ರಧ್ವಜವನ್ನು ಹಿಡಿದು ಮುಂದಿನ ಸಾಲಿನಲ್ಲಿ ನಡೆಯಲಿದ್ದಾರೆ.

Advertisement

ಸೀರೆಗೆ ನಿಷೇಧ
ಈ ಬಾರಿ ಉದ್ಘಾಟನಾ ಸಮಾರಂಭದಲ್ಲಿ  ಮಹಿಳಾ ಆ್ಯತ್ಲೀಟ್‌ಗಳು ಸೀರೆಯುಟ್ಟು ಹೆಜ್ಜೆ ಹಾಕುವುದಿಲ್ಲ. ಸೀರೆ ಬದಲು ಪ್ಯಾಂಟ್‌, ಬ್ಲೇಜರ್‌ ಧರಿಸುವರು. ಸೀರೆ ಅವರು ಹೆಜ್ಜೆ ಹಾಕುವುದಕ್ಕೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್‌ ಸಮಿತಿ ಅದನ್ನು ಕಳೆದ ಕಾಮನ್ವೆಲ್ತ್‌ನಿಂದ ರದ್ದು ಮಾಡಿದೆ.

ಏಶ್ಯಾಡ್‌ ಲಾಂಛನ
ಸ್ವರ್ಗದ ಹಕ್ಕಿ “ಬಿನ್‌ ಬಿನ್‌’, ಒಂದು ಕೊಂಬಿನ “ಇಕಾ’ ಖಡ್ಗ ಮೃಗ ಹಾಗೂ ಬವಿಯನ್‌ ಜಿಂಕೆ “ಆಟಂಗ್‌’ 2018ರ ಏಶ್ಯನ್‌ ಗೇಮ್ಸ್‌ನ ಅದೃಷ್ಟ ಸೂಚಕ ಲಾಂಛನಗಳಾಗಿ ಗುರುತಿಸಿಕೊಂಡಿವೆ. ಇವು ಆ ದೇಶದ ಜೀವ ವೈವಿಧ್ಯವನ್ನೂ ಪ್ರತಿನಿಧಿಸುತ್ತವೆ. ಇವುಗಳ ಆಯ್ಕೆಯಲ್ಲಿ ಇಂಡೋನೇಶ್ಯ ರಾಷ್ಟ್ರಾಧ್ಯಕ್ಷ ಜೋಕೊ ವಿಡೋಡೊ ಸ್ವತಃ ಮುತುವರ್ಜಿ ವಹಿಸಿದ್ದರು.

ಬಿನ್‌ ಬಿನ್‌ (ಸ್ವರ್ಗಲೋಕದ ಹಕ್ಕಿ) ರಣತಂತ್ರದ ಸಂಕೇತ
ಆಟಂಗ್‌ (ಇಂಡೋನೇಶ್ಯದ ವಿಶಿಷ್ಟ ಜಿಂಕೆ ತಳಿ)ವೇಗದ ಸಂಕೇತ
ಇಕಾ (ರಿನೋಸೋರಸ್‌, ಖಡ್ಗಮೃಗ) ಸಾಮರ್ಥ್ಯದ ಸಂಕೇತ

Advertisement

Udayavani is now on Telegram. Click here to join our channel and stay updated with the latest news.

Next