Advertisement

188 ಇಂದಿರಾ ಕ್ಯಾಂಟೀನ್‌ ಸ್ಥಾಪನೆಗೆ ಅಸ್ತು

10:48 PM Nov 16, 2023 | |

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಮಾಡಲು ಸರಕಾರ ಮುಂದಾಗಿದ್ದು, ಇದಕ್ಕಾಗಿ ಒಟ್ಟು 154 ಕೋಟಿ ರೂ. ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಈ ವಿಚಾರ ತಿಳಿಸಿದ್ದಾರೆ. ಬಿಬಿಎಂಪಿ ಹೊರತುಪಡಿಸಿ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 188 ಕಡೆ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲಾಗುತ್ತದೆ. ಈ ಕಾಮಗಾರಿಗೆ ಕೆಟಿಟಿಪಿ ವಿನಾಯಿತಿ ನೀಡಲಾಗಿದೆ. ಅನುಮೋದಿತ ವಿನ್ಯಾಸದಡಿ 154 ಕೋಟಿ ರೂ. ವೆಚ್ಚದಲ್ಲಿ 188 ಕ್ಯಾಂಟೀನ್‌ ಮಾಡಲಾಗುತ್ತದೆ. ಸ್ಪರ್ಧೆ ಇಲ್ಲದ ಕಾರಣ ಕೆಟಿಟಿಪಿ ಕಾಯ್ದೆ ವಿನಾಯಿತಿ ಕೊಡಲಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರ ಭೇಟಿ
ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಪಟ್ಟಂತೆ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸಂಪುಟ ಸಭೆ ಬಳಿಕ ರಾಜಭವನಕ್ಕೆ ಭೇಟಿ ನೀಡಿದ ಅವರು ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟ ವರದಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ರಾಜ್ಯಪಾಲರು ಇದಕ್ಕೆ ಸಮ್ಮತಿ ನೀಡುವ ಸಾಧ್ಯತೆ ಇದೆ.

 ನಾಗರಿಕ ಸೇವಾ ನಿಯಮದ 16(ಎ) ಗೆ ತಿದ್ದುಪಡಿ. ಗ್ರೂಪ್‌ ಸಿ ಮತ್ತು ಡಿ ನೌಕರರು ಮತ್ತೂಂದು ಜಿಲ್ಲೆಗೆ ವರ್ಗಾವಣೆಗೊಂಡಾಗ ಜ್ಯೇಷ್ಠತೆಯಲ್ಲಿ ಕೊನೆಯಲ್ಲಿ ಇಡಲಾಗುತ್ತಿತ್ತು. ವೈಯಕ್ತಿಕ ಜ್ಯೇಷ್ಠತೆ ಉಳಿಸುವ ಬಗ್ಗೆ ಚರ್ಚೆ. ಆದರೆ ಕಂದಾಯ, ಪೊಲೀಸ್‌ ಇಲಾಖೆ ಆಕ್ಷೇಪ ಹಿನ್ನೆಲೆಯಲ್ಲಿ ನಿರ್ಧಾರ ಬಾಕಿ ಇಟ್ಟ ಸಂಪುಟ.
 ಆಹಾರ ಇಲಾಖೆ ಸಗಟು ಗೋದಾಮುಗಳಲ್ಲಿ ಸಿಸಿಕೆಮರಾ ಅಳವಡಿಕೆಗೆ 12.24 ಕೋ. ರೂ. ಮಂಜೂರು.
 ನಗರಾಭಿವೃದ್ಧಿ ಇಲಾಖೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಯಾದ ಗ್ರಾಮಗಳ ಅಭಿವೃದ್ಧಿಗೆ ನೀಡಿದ್ದ 371 ಕೋಟಿ ರೂ. ಪೈಕಿ ಹೆಚ್ಚುವರಿಯಾಗಿ ಉಳಿದ 40 ಕೋಟಿ ರೂ.ಅನ್ನು ಘೋಷಿತ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧಾರ.
 ನಗರಾಭಿವೃದ್ಧಿ ಇಲಾಖೆಯಿಂದ ಎನ್‌ಜಿಟಿ ಪರಿಹಾರ ನಿಧಿಯಡಿ 17 ನಗರಗಳಿಗೆ 750 ಕೋಟಿ ರೂ. ವೆಚ್ಚದಲ್ಲಿ ಒಳ ಚರಂಡಿ, ಉನ್ನತೀಕರಣ . ಕೆಯುಐಡಿಎಫ್ ಸಿಯಿಂದ ಅನುಷ್ಠಾನ.
 ಬಿಡಿಎ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ನೀಡಿದ್ದ ಜಿ ಕೆಟಗರಿ ನಿವೇಶನ ಮಾರಾಟಕ್ಕೆ ಅನುಮತಿ.
 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 4 ಸಾವಿರ ಯಂತ್ರ ಚಾಲಿತ ದ್ವಿಚಕ್ರವಾಹನ ಖರೀದಿಗೆ ಒಪ್ಪಿಗೆ.

ಕೊನೆಗೂ ಗೋಣಿ ಚೀಲ ಖರೀದಿಗೆ ಒಪ್ಪಿಗೆ
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಕೊನೆಗೂ ಧಾನ್ಯ ಸಂಗ್ರಹಕ್ಕೆ ಗೋಣಿ ಚೀಲ ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಒಟ್ಟು 76 ಕೋಟಿ ರೂ. ವೆಚ್ಚದಲ್ಲಿ 80 ಲಕ್ಷ ಗೋಣಿ ಚೀಲ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಮೂರು ತಿಂಗಳ ಹಿಂದೆ ಈ ವಿಚಾರ ಬೆಂಬಲ ಬೆಲೆ ನಿಗದಿಗಾಗಿನ ಸಂಪುಟ ಉಪಸಮಿತಿಯ ಮುಂದೆ ಮಂಡನೆಯಾಗಿತ್ತು. ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಗೋಣಿ ಚೀಲ ಖರೀದಿಗೆ ಪ್ರಸ್ತಾಪ ಸಲ್ಲಿಕೆಯಾಗಿರುವ ಬಗ್ಗೆ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next