Advertisement

Karnataka: 188 ಹೊಸ ಇಂದಿರಾ ಕ್ಯಾಂಟೀನ್‌

12:32 AM Aug 20, 2023 | Team Udayavani |

ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ಉಳಿದ ಮಹಾನಗರ ಪಾಲಿಕೆ ಹಾಗೂ ಇನ್ನಿತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ನಿರ್ಧರಿಸಿರುವ ಸರಕಾರವು ಪ್ರತೀ ಉಪಾಹಾರ ಮತ್ತು ಊಟಕ್ಕೆ ಹಾಲಿ ದರವನ್ನೇ ಮುಂದುವರಿಸಲು ತೀರ್ಮಾನಿಸಿದೆ.

Advertisement

ಪ್ರಸ್ತುತ 197 ಇಂದಿರಾ ಕ್ಯಾಂಟೀನ್‌ಗಳಿದ್ದು, ಹೆಚ್ಚುವರಿಯಾಗಿ 188 ಕ್ಯಾಂಟೀನ್‌ಗಳನ್ನು ಆರಂಭಿಸ ಲಾಗುತ್ತದೆ. ಸ್ಥಳೀಯವಾಗಿ ಪ್ರಸಿದ್ಧಿ ಪಡೆದ ತಿಂಡಿ-ತಿನಿಸುಗಳು ಕೂಡ ಈ ಕ್ಯಾಂಟೀನ್‌ಗಳಲ್ಲಿ ಸಿಗಲಿದ್ದು, ಈಗಿರುವ ಅನ್ನ, ಸಾಂಬಾರ್‌ ಜತೆಗೆ ಎರಡು ಪಲ್ಯ, ಕೋಸಂಬರಿ, ಉಪ್ಪಿನಕಾಯಿ ಹಾಗೂ ಸಿಹಿ ತಿನಿಸು ಸೇರಿಕೊಳ್ಳಲಿವೆ.

ಪ್ರತೀ ಊಟಕ್ಕೆ 62 ರೂ. ವ್ಯಯವಾಗಲಿದ್ದು, ಸರಕಾರ 37 ರೂ.ಗಳನ್ನು ಭರಿಸಲಿದೆ. ಬೆಳಗಿನ ಉಪಾಹಾರಕ್ಕೆ ಹಾಲಿ ದರ 5 ರೂ. ಹಾಗೂ ಮಧ್ಯಾಹ್ನ, ರಾತ್ರಿಯ ಊಟಕ್ಕೆ ತಲಾ 10 ರೂ.ಗಳನ್ನು ಮುಂದು ವರಿಸಲಾಗಿದೆ. ಹೀಗಾಗಿ ಒಬ್ಬ ವ್ಯಕ್ತಿ ದಿನಕ್ಕೆ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಸಿಎಂ ನೇತೃತ್ವದಲ್ಲಿ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಬಳಿಕ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ 197 ಇಂದಿರಾ ಕ್ಯಾಂಟೀನ್‌ಗಳನ್ನು ದುರಸ್ತಿಗೊಳಿಸಿ ಮರುಚಾಲನೆಗೊಳಿಸಲು 21.21 ಕೋಟಿ ರೂ.ಗಳ ಅನುದಾನವನ್ನು ಅನುಮೋದಿಸಲಾಗಿದೆ. ಹೊಸದಾಗಿ 188 ಕ್ಯಾಂಟೀನ್‌ಗಳು ಸೇರ್ಪಡೆಗೊಳ್ಳಲಿವೆ. ಬೆಂಗಳೂರಿನಲ್ಲಿ ಹೆಚ್ಚುವರಿ ಕ್ಯಾಂಟೀನ್‌ ಅಥವಾ ಊಟದ ದರ ಹೆಚ್ಚಿಸುವ ವಿಚಾರವಾಗಿ ಯಾವುದೇ ಚರ್ಚೆಗಳು ಆಗಿಲ್ಲ ಎಂದು ವಿವರಿಸಿದರು.

Advertisement

ಮೇಲ್ಮನವಿಗೆ ನಿರ್ಧಾರ
ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆದಾರ ಸಂಸ್ಥೆಯಾಗಿದ್ದ ಕ್ರಿಸ್ಟಿಫೈಡ್‌ ಸಂಸ್ಥೆ ಹಾಗೂ ಸರಕಾರದ ನಡುವಿನ ವ್ಯಾಜ್ಯ ಸಂಬಂಧ ಮೇಲ್ಮನವಿ ಸಲ್ಲಿಸಲು ವಿಳಂಬವಾದ್ದರಿಂದ 224 ಕೋಟಿ ರೂ. ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದು, ಇದಕ್ಕೆ 4 ವಾರಗಳ ಸಮಯ ಪಡೆದು ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಕಾವೇರಿ ವಿವಾದ:
ನಾಳೆ ಸು.ಕೋ.ಗೆ ಮನವಿ ಕಾವೇರಿ ಜಲವಿವಾದ ಸಂಬಂಧ ಸುಪ್ರೀಂ ಕೋರ್ಟ್‌ಗೆ ರಾಜ್ಯದ ಪರಿಸ್ಥಿತಿ ವಿವರಿಸಲು ನಿರ್ಧರಿಸಿರುವ ಸರಕಾರವು ಸೋಮವಾರದಂದು ಪ್ರಮಾಣಪತ್ರವನ್ನೂ ಸಲ್ಲಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಗೆ ರಾಜ್ಯ ಹೈಕೋರ್ಟ್‌ನ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರನ್ನು ಕರೆಯಿಸಿಕೊಂಡ ಸರಕಾರವು ಕಾನೂನಾತ್ಮಕ ಅಂಶಗಳ ಕುರಿತು ಸಮಾಲೋಚಿಸಿತು. ಈ ವೇಳೆ ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಬಹುದಾದ ವಾದದ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರು ಸರಕಾರಕ್ಕೆ ವಿವರಿಸಿದರು. ಸೋಮವಾರವೇ ಪ್ರಮಾಣಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರನ್ನು ಬಿಡಲಾಗಿದ್ದು, ರಾಜ್ಯದಲ್ಲಿ ಬರಗಾಲದ ಸನ್ನಿವೇಶ ಇದೆ. ಕುಡಿಯುವ ನೀರಿನ ಸಹಿತ ಮೂಲಭೂತ ಅಗತ್ಯಗಳಿಗೆ ನೀರಿನ ಕೊರತೆ ಇರುವುದನ್ನು ಸುಪ್ರೀಂ ಕೋರ್ಟ್‌ ಮುಂದೆ ಅರಿಕೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಲಿಕಾ ಬಲವರ್ಧನೆಗೆ 78 ಕೋ. ರೂ.
ಕೋವಿಡ್‌ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗ್ಯಾಜೆಟ್‌ಗಳನ್ನು ಒದಗಿಸಲಾಗಿತ್ತು. ಇವುಗಳ ವೆಚ್ಚ ಸಹಿತ 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ 78.13 ಕೋಟಿ ರೂ.ಗಳನ್ನು ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕಲಿಕಾ ಬಲವರ್ಧನೆ ಮಾಡಲಾಗುತ್ತದೆ. ಹಿಂದಿನ ಶೈಕ್ಷಣಿಕ ಕೊರತೆಯನ್ನು ಈ ಮುಖಾಂತರ ನೀಗಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next