Advertisement

ಪುತ್ತೂರಿನಲ್ಲಿ ಮೆಗಾ ವಿದ್ಯುತ್‌ ಯೋಜನೆಗೆ 18.5 ಕೋ.ರೂ.

10:46 AM Jul 23, 2018 | Team Udayavani |

ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮೆಗಾ ಯೋಜನೆಯೊಂದು ಅನುಷ್ಠಾನಗೊಳ್ಳುತ್ತಿದ್ದು, ಒಟ್ಟು ಸುಮಾರು 18.50 ಕೋಟಿ ರೂ. ಗಳ ಈ ಯೋಜನೆ ಪೂರ್ಣಗೊಂಡರೆ ವಿದ್ಯುತ್‌ ವ್ಯವಸ್ಥೆ ಸಮಸ್ಯೆ ಮುಕ್ತಗೊಂಡು ಸುಸಜ್ಜಿತಗೊಳ್ಳಲಿದೆ. ಕೇಂದ್ರ ಸರಕಾರದ ಇಂಟಗ್ರೇಟೆಡ್‌ ಪವರ್‌ ಡೆವಲಪ್‌ಮೆಂಟ್‌ ಸ್ಕೀಂ (ಐಪಿಡಿಎಸ್‌) ಮೂಲಕ ನಗರ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆ ಬಲಪಡಿಸಲು ಅನುದಾನ ಮಂಜೂರು ಮಾಡಲಾಗುತ್ತಿದೆ. ಪುತ್ತೂರು ಸುಳ್ಯ ಹಾಗೂ ಬಂಟ್ವಾಳ ತಾಲೂಕುಗಳನ್ನು ಆಯ್ಕೆ ಮಾಡಿ 21 ಕೋಟಿ ರೂ. ಅನುದಾನ ನೀಡಿದೆ. ಪುತ್ತೂರಿಗೆ ಗರಿಷ್ಠ 15 ಕೋಟಿ ರೂ. ಅನುದಾನ ಲಭಿಸಿದ್ದು, ಕಾಮಗಾರಿ ಆರಂಭಗೊಂಡಿದೆ. 

Advertisement

ಹೀಗಿದೆ ಯೋಜನೆ
ಕೇಂದ್ರ ಸರಕಾರದ ಈ ಯೋಜನೆಯ ಪ್ರಕಾರ ಓವರ್‌ ಲೋಡ್‌ ಆಗುವ ಟ್ರಾನ್ಸ್ ಫಾರ್ಮರ್‌ಗಳಿಗೆ ಹೆಚ್ಚುವರಿ ಟಿಸಿಗಳನ್ನು ಅಳವಡಿಸಲು ಪುತ್ತೂರು ನಗರಕ್ಕೆ 138 ಟಿ.ಸಿ.ಗಳು ಲಭ್ಯವಾಗುತ್ತವೆ. ಹಳೆಯ ತಂತಿಗಳನ್ನು ಬದಲಿಸಲು 1,200 ಕಿ.ಮೀ. ಉದ್ದದ ತಂತಿ ಲಭಿಸುತ್ತದೆ. 11 ಕೆ.ವಿ.ಗಳಲ್ಲಿ ಹಾಲಿ ಬಳಸಲಾಗುತ್ತಿರುವ ರ್ಯಾಮಿಟ್‌ ವೈರ್‌ ಗಳನ್ನು ಬದಲಾಯಿಸಿ ಕೋಯೆಟ್‌ ವೈರ್‌ ಗಳನ್ನು ಅಳವಡಿಸಲು ಈ ಯೋಜನೆಯಲ್ಲಿ ಮಂಜೂರಾಗುತ್ತದೆ.

ಹಾರಾಡಿಯಿಂದ ಬೊಳುವಾರಿಗೆ ಬಂದು ಅಲ್ಲಿಂದ ಮುಕ್ರಂಪಾಡಿ ಕೈಗಾರಿಕಾ ವಲಯ ತನಕದ ಎರಡು ಟಿ.ಸಿ. ವ್ಯಾಪ್ತಿಯ ಎಚ್‌.ಟಿ. ತಂತಿಗಳಿಗೆ ಕೋಯಟ್‌ ವಯರ್‌ ಬಳಸಲು ನಿರ್ಧರಿಸಲಾಗಿದೆ. ಈ ವೈರ್‌ಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಯೋಜನೆಗೆ ಸಂಬಂಧಪಟ್ಟವರೇ ಕಾಮಗಾರಿ ನಿರ್ವಹಿಸುತ್ತಾರೆ. ಇಷ್ಟು ವ್ಯವಸ್ಥೆಗಳು ಮೆಸ್ಕಾಂಗೆ ಸಂಬಂಧಪಟ್ಟಂತೆ ಪುತ್ತೂರಿನಲ್ಲಿ ಆದರೆ ಭಾಗಶಃ ಸಮಸ್ಯೆಗಳು ಬಗೆಹರಿಯುತ್ತವೆ.

ಭೂಗತ ಕೇಬಲ್‌ಗೆ
 3.50 ಕೋ.ರೂ. ಐಪಿಡಿಎಸ್‌ ಯೋಜನೆಯಲ್ಲಿ ಸಲ್ಲಿಸಲಾದ ಭೂಗತ ಕೇಬಲ್‌ ಅಳವಡಿಕೆಯ ಮತ್ತೂಂದು ಪ್ರಸ್ತಾವನೆಯೂ ಪುತ್ತೂರಿಗೆ ಮಂಜೂರುಗೊಂಡಿದೆ. ಈ ಮಂಜೂರಾತಿ ಪುತ್ತೂರು, ಉಳ್ಳಾಲಕ್ಕೆ ಮಾತ್ರ ಲಭಿಸಿದೆ. ಇದರಲ್ಲಿ ಪ್ರತ್ಯೇಕವಾಗಿ 3.50 ಕೋ. ರೂ. ಲಭಿಸಲಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಟೆಂಡರ್‌ ಆದ ಬಳಿಕ ಹಾರಾಡಿ ಮೆಸ್ಕಾಂ ಕೇಂದ್ರದಿಂದ ಗ್ರಾಮಾಂತರಕ್ಕೆ ಹೋಗುವ ಕೆಮ್ಮಾಯಿವರೆಗೆ, ಸಾಲ್ಮರದ ವರೆಗೆ, ನೆಹರೂನಗರದವರೆಗೆ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸಲಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿ ಹಳೆ ತಂತಿ ಇರುವುದರಿಂದ ಪುತ್ತೂರಿನಲ್ಲಿ ಪವರ್‌ಕಟ್‌ ಸಹಿತ ಇತರ ಸಮಸ್ಯೆಗಳಿಗಿಂತಲೂ ತಂತಿ ಸಮಸ್ಯೆಯೇ ಅಧಿಕವಾಗ್ತಿದೆ. ಹೊಸ ವ್ಯವಸ್ಥೆ ಅನುಷ್ಠಾನಗೊಂಡ ಮೇಲೆ ಓವರ್‌ಲೋಡ್‌ ಸಂದರ್ಭದಲ್ಲೂ ತಂತಿಗಳ ಧಾರಣ ಸಾಮರ್ಥ್ಯ ಅದನ್ನು ತಡೆದುಕೊಳ್ಳಲಿದೆ. 

Advertisement

ಹೆಚ್ಚು  ಅನುದಾನ
ಪ್ರಸ್ತಾವನೆ ಹಂತದಲ್ಲೇ ಹೆಚ್ಚು ಅನುದಾನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಹೆಚ್ಚು ಅನುದಾನ ಪುತ್ತೂರಿಗೆ ಲಭಿಸಿದೆ. ಐಪಿಡಿಎಸ್‌ನಲ್ಲಿ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ಲಭ್ಯವಾಗುತ್ತವೆ. ಈಗಾಗಲೇ ಕೆಲಸ ಆರಂಭಗೊಂಡಿದ್ದು, 2019ರ ಆಗಸ್ಟ್‌ ಒಳಗೆ ಮುಗಿಸಲು ಗುತ್ತಿಗೆದಾರರಿಗೆ ಸಮಯಾವಕಾಶವಿದೆ. ಈ ಕೆಲಸಗಳು ಪೂರ್ಣಗೊಂಡರೆ ಮುಂದಿನ 15 ವರ್ಷಗಳ ತನಕ ಸಮಸ್ಯೆ ಇರುವುದಿಲ್ಲ.
ರಾಮಚಂದ್ರ, ಎಇಇ ಮೆಸ್ಕಾಂ,
ಪುತ್ತೂರು ನಗರ ಉಪ ವಿಭಾಗ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next