Advertisement

ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ 184 ಜೋಡಿ

07:21 AM Feb 03, 2019 | |

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ವಿವಾಹದಲ್ಲಿ ಜಾತಿ ಭೇದವಿಲ್ಲದೆ ಸುತ್ತೂರು ಮಠಾಧೀಶರಾದ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ರಾಜ್ಯ-ಹೊರ ರಾಜ್ಯಗಳ 184 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

ತಮಿಳುನಾಡಿನ ಎಂಟು ಜೋಡಿಗಳು ಸೇರಿದಂತೆ ಪರಿಶಿಷ್ಟ ಜಾತಿಯ 119 ಜೋಡಿ, ಪರಿಶಿಷ್ಟ ಪಂಗಡ 16, ಹಿಂದುಳಿದ ವರ್ಗಗಳ 23, ವೀರಶೈವ-ಲಿಂಗಾಯತ 18 ಜೋಡಿಗಳು ಸೇರಿದಂತೆ ಒಟ್ಟು 184 ಜೋಡಿಗಳಲ್ಲಿ ಎಂಟು ಜೋಡಿಗಳು ಅಂತರ ಜಾತಿ ವಿವಾಹವಾದರೆ, ಅಂಗವಿಕಲ ನಾಲ್ಕು ಜೋಡಿಗಳು ಹಾಗೂ ಎರಡು ವಿಧುರ-ವಿಧವೆ ಜೋಡಿ ಸತಿ-ಪತಿಗಳಾದರು. ನಂಜನಗೂಡು ತಾಲೂಕು ಉಪನೋಂದಣಾಧಿಕಾರಿ ಸಿ.ಪಿ.ನಂದಿನಿ ಸ್ಥಳದಲ್ಲೇ 184 ಜೋಡಿಗಳ ವಿವಾಹವನ್ನು ನೋಂದಣಿ ಮಾಡಿದರು.

ವಾಸ್ತವ್ಯ: ಶ್ರೀ ಮಠದ ವತಿಯಿಂದ ವಧುವಿಗೆ ಮಾಂಗಲ್ಯ, ಸೀರೆ, ಕಾಲುಂಗರ, ವರನಿಗೆ ಪಂಚೆ, ವಲ್ಲಿ ಶರ್ಟ್‌ ನೀಡಲಾಗಿತ್ತು. ವಧು-ವರನ ಕಡೆಯ ಕುಟುಂಬದವರು ಶುಕ್ರವಾರವೇ ಬಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದರು.

ಪ್ರತಿಜ್ಞಾವಿಧಿ: ಬೆಳಗ್ಗೆ ನೂತನ ವಧು-ವರರು ಹೊಸ ಬಟ್ಟೆ ತೊಟ್ಟು , ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಬಂದು ಸಮಾನ ವೇದಿಕೆಯಲ್ಲಿ ತಾಳಿ ಕಟ್ಟುವ ಶುಭ ಘಳಿಗೆಯನ್ನು ಎದುರು ನೋಡುತ್ತಾ ಕುಳಿತರು. ಉಜ್ಜಯಿನಿ ಶ್ರೀಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಚನ, ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹಿತನುಡಿ,

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಭಾಷಣದ ನಂತರ ಬೆಳಗ್ಗೆ 11.56ಕ್ಕೆ ಸಕಲ ವಾದ್ಯಗಳೊಂದಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ 184 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನವ ದಂಪತಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಎಚ್.ಡಿ.ಕುಮಾರಸ್ವಾಮಿ-ಅನಿತಾ ಕುಮಾರ ಸ್ವಾಮಿ ದಂಪತಿ, ನವ ದಂಪತಿಗಳಿಗೆ ಉಪ ನೋಂದಣಾಧಿಕಾರಿಗಳು ಮಾಡಿಕೊಟ್ಟ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ, ಮಾಂಗಲ್ಯವನ್ನು ನೀಡಿದ್ದರೆ, ಡಾ.ಸುಧಾಮೂರ್ತಿ, ನವ ಜೋಡಿಗಳಿಗೆ ಬೆಳ್ಳಿಯ ಕುಂಕುಮ ಭರಣಿಯನ್ನು ಉಡುಗೊರೆಯಾಗಿ ನೀಡಿದರು.

ಸೆಲ್ಫಿ ಸಂಭ್ರಮ: ಸ್ವತಃ ಮುಖ್ಯಮಂತ್ರಿ ಹಾಗೂ ಇತರೆ ಗಣ್ಯರ ಸಮ್ಮುಖದಲ್ಲಿ ವಿವಾಹವಾಗುತ್ತಿರುವ ಖುಷಿಯಲ್ಲಿದ್ದ ನವ ಜೋಡಿಗಳು ಸ್ವಾಮೀಜಿಗಳು, ಮುಖ್ಯಮಂತ್ರಿ, ಸಚಿವರ‌ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನಿಂಬಾಳ ಶ್ರೀಶಾಂತಲಿಂಗೇಶ್ವರ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಬಿ.ಹರ್ಷವರ್ಧನ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಅಶ್ವಿ‌ನ್‌ ಕುಮಾರ್‌, ಸಿ.ಎಸ್‌.ನಿರಂಜನಕುಮಾರ್‌, ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ ಮೊದಲಾದವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.

ಭೋಜನ: ನವ ದಂಪತಿಗಳಿಗೆ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ನಂತರ ನವ ದಂಪತಿಗಳಿಗೆ ಶ್ರೀಮಠದವತಿಯಿಂದ ಬಾಗಿನ ಕೊಟ್ಟು ಬೀಳ್ಕೋಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next