ರಾಮನಗರ: ಜಿಲ್ಲೆಯ 4 ತಾಲೂಕುಗಳ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದ್ದ 4133 ಪ್ರಕರಣಗಳು ಲೋಕ್ ಅದಾಲತ್ ಮುಂದೆ ಬಂದಿದ್ದು ಈ ಪೈಕಿ 1607 ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ವೆಂಕಟಪ್ಪ ತಿಳಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭಾಗವಹಿಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸುವುದು, ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ. ವ್ಯಾಜ್ಯ ಪೂರ್ವ 2191 ಪ್ರಕರಣಗಳ ಪೈಕಿ 229 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು.
538 ರಾಜೀ ಆಗಬಲ್ಲ ಕ್ರಿಮಿನಲ್ ಅಪರಾಧಿಕ ಪ್ರಕರಣಗಳು, 90 ಮೋಟಾರ್ ವಾಹನ ಕಾಯ್ದೆ ಪ್ರಕರಣ, 1 ಕಾರ್ಮಿಕ ವಾದ ಪ್ರಕರಣ, 6 ವೈವಾಹಿಕ, ಕೌಟುಂಬಿಕ ದೌರ್ಜನ್ಯ ಪ್ರಕರಣ, 131 ಚೆಕ್ ಬೌನ್ಸ್ ಪ್ರಕರಣ, ಇತರೆ 160 ಸಿವಿಲ್, 688 ವಿವಿಧ ರೀತಿಯ ಅಪರಾಧ ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ರಾಜಿಯಾಗಿವೆ. ಒಟ್ಟಾರೆ 1,836 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.
4 ಕೋಟಿ ರೂ.ಗೂ ಹೆಚ್ಚು ಪರಿಹಾರ: ಹಣಕಾಸು ಸಂಬಂಧ ವ್ಯಾಜ್ಯ ಪ್ರಕರಣಗಳಲ್ಲಿ 3.43 ಲಕ್ಷ, ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 96 ಲಕ್ಷ ಮೊತ್ತದ ವಾದಗಳನ್ನು ಇತ್ಯರ್ಥ ಪಡಿಸಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ 90 ಪ್ರಕರಣ ಇತ್ಯರ್ಥ ಪಡಿಸಿದ್ದು, ಆಯಾ ಸಂತ್ರಸ್ತರಿಗೆ ಒಟ್ಟು 2.63 ಕೋಟಿ ರೂ. ಪರಿಹಾರ ಮೊತ್ತ ದೊರೆತಿದೆ. 131 ಚೆಕ್ ಬೌನ್ಸ್ ಪ್ರಕರಣಗಳಲ್ಲಿ 36.72 ಲಕ್ಷ ರೂ ಪರಿಹಾರ, ಇತರೆ ಸಿವಿಲ್ ಪ್ರಕರಣಗಳಲ್ಲಿ 1.69 ಲಕ್ಷ ರೂ. 688 ವಿವಿಧ ಅಪರಾಧ ಪ್ರಕರಣಗಳಲ್ಲಿ 27.50 ಲಕ್ಷ ರೂ. ದಂಡ ವಸೂಲಿ ನಿರ್ಧಾರದೊಂದಿಗೆ ಪ್ರಕರಣಗಳು ಇತ್ಯರ್ಥವಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 4.40 ಕೋಟಿ ಎಂದು ತಿಳಿಸಿದ್ದಾರೆ.
ಬಾಂಧವ್ಯ ವೃದ್ಧಿ:ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ವ್ಯಾಜ್ಯಗಳು ಶೀಘ್ರ ಇತ್ಯರ್ಥವಾಗುವುದಲ್ಲದೆ, ವ್ಯಾಜ್ಯದಲಿರುವ ನಾಗರೀಕರ ನಡುವೆ ಉತ್ತಮ ಬಾಂಧವನ್ನು ವೃದ್ದಿಸಲು ಸಹಕಾರಿಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಲೋಕ್ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಜಿ.ಉಮಾ, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಚ್.ಎಸ್. ಮರುಳಸಿದ್ದಾರಾಧ್ಯ, ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಸಿಜೆಎಂ ಎನ್.ಎಸ್.ಕುಲಕರ್ಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ವೆಂಕಪ್ಪ, ದಿನೇಶ್ ಇದ್ದರು.